ADVERTISEMENT

ಹಾಸನ | ‘ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ಉಳಿಸಿ’

ಸತ್ತೀಗರಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ ದೇಗುಲದ ಜೀರ್ಣೋದ್ಧಾರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:08 IST
Last Updated 15 ಏಪ್ರಿಲ್ 2025, 14:08 IST
ಹಾಸನ ತಾಲ್ಲೂಕಿನ ಸತ್ತೀಗರಹಳ್ಳಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು
ಹಾಸನ ತಾಲ್ಲೂಕಿನ ಸತ್ತೀಗರಹಳ್ಳಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು   

ಹಾಸನ: ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ಉಳಿಸಿ, ಬೆಳೆಸುವಂತಾಗಬೇಕು. ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವ ಮೂಲಕ ಆನಂದ, ನೆಮ್ಮದಿಯ ಜೀವನ ನಡೆಸಬೇಕು ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಟ್ಟಾಯ ಹೋಬಳಿಯ ಸತ್ತೀಗರಹಳ್ಳಿಯ ಬಸವೇಶ್ವರ ಸ್ವಾಮಿ ನೂತನ ದೇವಾಲಯದ ಜೀರ್ಣೋದ್ಧಾರ ಮತ್ತು ನೂತನ ವಿಗ್ರಹಗಳ ಪುನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಂದು ಸಂಸಾರ ಸುಖವಾಗಿ ಇರಬೇಕಾದರೆ, ಹೆಣ್ಣಿನ ಪಾತ್ರ ಮಹತ್ವದ್ದು. ಮಕ್ಕಳಿಗೆ ಉತ್ತಮ ಸಂಸ್ಕಾರ, ಆಚಾರ–ವಿಚಾರಗಳನ್ನು ಕಲಿಸುವ ತಾಯಿ, ಮಕ್ಕಳಿಗೆ ವಿದ್ಯೆ ಕಲಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.

ADVERTISEMENT

ಹಳ್ಳಿಯ ಜೀವನ ಎಷ್ಟೇ ಕಷ್ಟವಿದ್ದರೂ, ಆದರ್ಶ ಜೀವನ, ಪ್ರಾಮಾಣಿಕತೆ ಹೆಚ್ಚಾಗಿರುತ್ತದೆ. ದೇವರ ಪೂಜೆ ನಿರಂತರವಾಗಿ ನಡೆಯಬೇಕು. ಮನಸ್ಸು ಕಟ್ಟುವ ಕೆಲಸ ಮಾಡಬೇಕು ಎಂದರು.

ನುಗ್ಗೇಹಳ್ಳಿ ಪುರವರ್ಗ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಮಯೋಗೀಶ್ವರ ಬೇಬಿ ಮಠದ ಶಿವಬಸವ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ, ಟಿ.ಮಾಯಗೋಡನಹಳ್ಳಿ ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಸಿಡಿಗಹಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಮಠದ ಮಹಾಂತ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವೀಲೆ ಪರಮೇಶ್, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮುಖಂಡ ಅನಂದ್ ಪಾಟೀಲ್ ಭಾಗವಹಿಸಿದ್ದರು.

ನುಗ್ಗೇಹಳ್ಳಿ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನೂತನ ವಿಗ್ರಹಗಳನ್ನು 108 ಕುಂಭಗಳ ಸಮೇತ ಗಂಗಾ ಪೂಜೆಯೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನವೀಲೆ ರಾಜು ಅವರ ಕರಡೆ ವಾದ್ಯ, ತುಮಕೂರಿನ ವೀರೇಶ್ ಮತ್ತು ರೇಣುಕ ಪ್ರಸಾದ್‌ ಅವರ ಭದ್ರಕಾಳಿ ವೇಷಧಾರಿಗಳು, ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು.

ಸಿದ್ದಲಿಂಗ ಸ್ವಾಮೀಜಿ ಕಳಸಾರೋಹಣ ನೆರವೇರಿಸಿದರು. ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.