
ವೆಬ್‌ಕಾಸ್ಟಿಂಗ್ ವ್ಯವಸ್ಥೆ
ಹಾಸನ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ ಫೆ.28ರಿಂದ ಮಾರ್ಚ್ 17ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 14,759 ಹೊಸ ವಿದ್ಯಾರ್ಥಿಗಳು, 305 ಖಾಸಗಿ ಅಭ್ಯರ್ಥಿಗಳು, 715 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಮೂವರು ಫಲಿತಾಂಶ ಉನ್ನತೀಕರಣ ಅಭ್ಯರ್ಥಿಗಳು ಸೇರಿ ಒಟ್ಟು 15,782 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದರು.
ಕಲಾ ವಿಭಾಗದಲ್ಲಿ 2,594, ವಾಣಿಜ್ಯ ವಿಭಾಗದಲ್ಲಿ 5,317, ವಿಜ್ಞಾನ ವಿಭಾಗ 6,848 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 4,875 ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಹಾಗೂ 9,884 ವಿದ್ಯಾರ್ಥಿಗಳು ನಗರ ಪ್ರದೇಶದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದೆ. ಪ್ರತಿಯೊಂದು ಕೇಂದ್ರದಲ್ಲೂ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಸಮೀಪದ ಝರಾಕ್ಸ್ ಅಂಗಡಿ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿಯೊಂದು ಕೊಠಡಿಯ ಚಟುವಟಿಕೆಗಳ ಮೇಲ್ವಿಚಾರಣೆ ನಡೆಯಲಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷಿತ ವಿತರಣೆಗೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಲಾಗಿದ್ದು, ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಶ್ನೆ ಪತ್ರಿಕೆಗಳನ್ನು 10 ಮಾರ್ಗಗಳಲ್ಲಿ ವಿತರಿಸುವ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ, ಬೇರೆ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕಾಗಿದ್ದು, ನಿಯೋಜನೆಗೊಂಡ ಸಿಬ್ಬಂದಿ ಹೊರತಾಗಿ ಇತರರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ಮೊಬೈಲ್, ರಿಸ್ಟ್ ವಾಚ್, ಬ್ಲೂಟೂತ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತರಲು ಅವಕಾಶ ಇರುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಲ್ಲ. ಮೂರು ವರ್ಷಗಳಿಂದ ಯಾವುದೇ ಪರೀಕ್ಷಾ ಅಕ್ರಮಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
33 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮತ್ತು ಕೊಠಡಿ ಮೇಲ್ವಿಚಾರಕರನ್ನು ರ‍್ಯಾಂಡಮೈಜೇಷನ್ ಮೂಲಕ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳ ಸದಸ್ಯರನ್ನು ಮತ್ತು ತಾಲ್ಲೂಕುವಾರು ಸಂಚಾರಿ ಜಾಗೃತ ದಳ ಸದಸ್ಯರ ತಂಡವನ್ನು ಹಾಗೂ ಸರ್‌ಪ್ರೈಸ್ ವಿಸಿಟ್ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದರು.
ಅಂಗವಿಕಲ ವಿದ್ಯಾರ್ಥಿಗಳಿಗೆ ಒಂದು ಭಾಷೆಯಿಂದ ವಿನಾಯಿತಿ, ವಾಚಕರ ಸಹಾಯ, ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ ಹಾಗೂ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಬಾರಿ 48 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲಿದ್ದಾರೆ ಎಂದರು.
ಪರೀಕ್ಷಾ ದಿನಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಸೆಸ್ಕ್ ಅಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ವ್ಯತ್ಯಯವಾಗದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲು ಈಗಾಗಲೇ ಸರ್ಕಾರದಿಂದ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ 40 ನಿಮಿಷ ಮುಂಚಿತವಾಗಿ ಹಾಜರಾಗಬೇಕು. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಸಾವಧಾನವಾಗಿ ಪರೀಕ್ಷೆ ಬರೆಯಲು ತಿಳಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.