ADVERTISEMENT

ಹಾಸನ: ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕ ಪತ್ತೆ; ಇಬ್ಬರ ಬಂಧನ

ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:33 IST
Last Updated 29 ಸೆಪ್ಟೆಂಬರ್ 2022, 13:33 IST
ಮುಜಾಯಿದ್ದಿನ್
ಮುಜಾಯಿದ್ದಿನ್   

ಹಾಸನ: ಚನ್ನರಾಯಪಟ್ಟಣದ ಮನೆಯಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಸ್ಪೋಟಕ ನಿರ್ಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಅಕ್ರಮವಾಗಿ ಸಂಗ್ರಹ ಮಾಡಿದ್ದ ಸ್ಫೋಟಕಕ್ಕೆ ಬಳಸುವ ಅರ್ಧ ಕೆ.ಜಿ. ಸಲ್ಫರ್ ಪೌಡರ್, 2 ಕೆ.ಜಿ. ದಾರ,ಒಂದು ಕೆ.ಜಿ. ಹಸಿ ನೂಲು, ಖಾಲಿ ಕೊಳವೆ ನ್ಯೂಸ್ ಪೇಪರ್ 100, ಪಟಾಕಿ ಬತ್ತಿ 50 ಸೇರಿದಂತೆ 14 ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರಕರಣ ಸಂಬಂಧಿಸಿದಂತೆ ನಯಾಜ್ ಮತ್ತು ಮುಜಾಯಿದ್ದಿನ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಪಟಾಕಿ ತಯಾರಿಗೋ ಅಥವಾ ಬೇರೆ ಉದ್ದೇಶಕ್ಕೆ ಸ್ಫೋಟಕ ಸಂಗ್ರಹಿಸಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮುಂದುವರೆದಿದೆ ಎಂದರು.

ADVERTISEMENT

ಕಳ್ಳನ ಬಂಧನ: ಅಂತರ ಜಿಲ್ಲಾ ಕಳ್ಳತನ ಆರೋಪಿಯನ್ನು ಬಂಧಿಸಿರುವ ಹೊಳೆನರಸೀಪುರ ಪೊಲೀಸರು, ₹ 3.34 ಲಕ್ಷ ಬೆಲೆಯ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಬೋವಿ ಕಾಲೊನಿಯ ಲಿಂಗೇಶ್ ಬಂಧಿತ ಆರೋಪಿ. ಈ ಹಿಂದೆ ಹೊಳೆನರಸೀಪುರದ 3 ಕಳ್ಳತನ ಪ್ರಕರಣ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು ಆರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಯಿಂದ 65 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಚೇತನ್ ಹಾಗೂ ಕುಟುಂಬದ ಆಭರಣಗಳು ಇರುವ ಬ್ಯಾಗ್ ಕಳ್ಳತನವಾಗಿರುವ ಕುರಿತು ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಡಿವೈಎಸ್ಪಿ ಮುರುಳೀಧರ್ ಮಾರ್ಗದರ್ಶನದಲ್ಲಿ, ಹೊಳೆನರಸೀಪುರ ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದು, ಪ್ರಕರಣವನ್ನು ಭೇದಿಸಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.