ಹಾಸನ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ರೈತರು ಕೃಷಿಗೆ ಪಡೆದ ಸಾಲದ ವಸೂಲಾತಿಗೆ ಜಮೀನು ಹರಾಜು ಮಾಡುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಕೆ.ಆರ್. ಪುರಂನ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಟಿ. ಗಂಗಾಧರ್ ಮಾತನಾಡಿ, ‘ಜಿಲ್ಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ಕೃಷಿ ಸಾಲ ವಸೂಲಾತಿಗೆ ಅನೇಕ ರೀತಿಯ ಕಾಯ್ದೆ ಬಳಸಿ, ರೈತರನ್ನು ಒಕ್ಕಲೆಬ್ಬಿಸುವ ಕ್ರಮದ ವಿರುದ್ದ ಪ್ರತಿಭಟನೆ ಮಾಡಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಬೆಳೆ ಸಾಲ ತಿರುವಳಿ ಮಾಡದೇ ಸುಸ್ಥಿದಾರರಾಗಿರುವ ರೈತರ ಸಾಲವನ್ನು ಏಕಗಂಟು ಸಾಲ ತಿರುವಳಿ ಮೂಲಕ ಇತ್ಯರ್ಥಡಿಸಲಾಗುತ್ತಿದೆ. ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ಸಾಲವನ್ನು ತಿರುವಳಿ ಮಾಡದೇ ಉದಾಸೀನ ಧೋರಣೆ ಅನುಸರಿಸಿದೆ’ ಎಂದು ಆರೋಪಿಸಿದರು.
‘ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಬಡ್ಡಿಮನ್ನಾ ಮಾಡುವುದರೊಂದಿಗೆ ಅಸಲು ಸಾಲವನ್ನು ತೀರಿಸಲು ರೈತರಿಗೆ ಅನುಕೂಲ ಕಲ್ಪಿಸಿದೆ. ಆದರೆ ಗ್ರಾಮೀಣ ಬ್ಯಾಂಕ್ ರೈತರ ಜಮೀನನ್ನು ಹರಾಜು ಮಾಡುವ ನೋಟಿಸ್ ನೀಡುತ್ತಿದ್ದಾರೆ’ ಎಂದು ದೂರಿದರು.
‘ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದ ಬ್ಯಾಂಕ್‌ನಲ್ಲಿ 2007ರಲ್ಲಿ ಸಾಲ ಪಡೆದಿದ್ದ ರಾಜೇಗೌಡರು, ಸಾಲ ತೀರಿಸಲಾಗದೇ 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಅವರ ಪತ್ನಿ ಶಾರದಮ್ಮ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ. ಇದೀಗ ಅವರ ಮಗಳಿಗೆ ಜಮೀನು ಹರಾಜು ಮಾಡುವುದಾಗಿ ಬ್ಯಾಂಕ್‌ನಿಂದ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅವರ ಸಾಲವನ್ನು ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ಯಾವುದೇ ಕಾರಣಕ್ಕೆ ರೈತರ ಮೇಲೆ ಗದಾಪ್ರಹಾರ ಮಾಡಬಾರದು. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ಬ್ಯಾಂಕ್ ಕ್ರಮ ಖಂಡಿಸಿ, ರಾಜ್ಯದ ಎಲ್ಲ ಬ್ಯಾಂಕ್ ಎದುರು ಪ್ರತಿಭಟನೆ ಮಾಡಲಾಗುವುದು. ಕೂಡಲೇ ಬ್ಯಾಂಕ್‌ಗಳು ಏಕಗಂಟು ಸಾಲ ತಿರುವಳಿ ಮಾಡಿ, ಯಾವುದೇ ಸುಸ್ತಿ ಇರುವುದಿಲ್ಲ ಎಂದು ಪತ್ರ ಕೊಡಬೇಕು’ ಎಂದು ಆಗ್ರಹಿಸಿದರು.
ಬ್ಯಾಂಕ್‌ನ ವ್ಯವಸ್ಥಾಪಕರು, ರೈತರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕಣಗಾಲ್ ಮೂರ್ತಿ, ನಂಜುಂಡಸ್ವಾಮಿ, ಗ್ಯಾರಂಟಿ ರಾಮಯ್ಯ, ಭೋಗ ಮಲ್ಲೇಶ್, ಭುವನೇಶ್, ಕುಮಾರಸ್ವಾಮಿ, ಪ್ರಕಾಶ್, ಚಂದ್ರು, ಯಾಕೂಬ್ ಭಾಗವಹಿಸಿದ್ದರು.
ರೈತರ ಮೇಲೆ ಗದಾಪ್ರಹಾರ ಮಾಡುವುದನ್ನು ನಿಲ್ಲಿಸಿ ಕಾಯ್ದೆ ಬಳಸಿ ರೈತರನ್ನು ಒಕ್ಕಲೆಬ್ಬಿಸಿದರೆ ಹೋರಾಟ ಬೆಳೆ ಸಾಲ ತಿರುವಳಿ ಮಾಡಲು ಒತ್ತಾಯ
ರೈತರ ಸಮಸ್ಯೆ ಕುರಿತು 2023ರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು. ಆದರೆ ಇದುವರೆಗೂ ಅಗತ್ಯ ಕ್ರಮ ಕೈಗೊಂಡಿಲ್ಲ. ಹೀಗಾಗಿ ಧರಣಿ ಕುಳಿತಿದ್ದೇವೆ.ಕೆ.ಟಿ. ಗಂಗಾಧರ್ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.