ಶ್ರವಣಬೆಳಗೊಳ: ಮಳೆ, ಕೆರೆ–ಕಟ್ಟೆ, ಅಣೆಕಟ್ಟೆಯ ಮೂಲಕ ನಾಲಾ ನೀರನ್ನು ನಂಬಿಕೊಂಡ ಬಹುತೇಕ ಕೃಷಿಕರು, ತಮ್ಮ ಹೊಲ ಗದ್ದೆಗಳಲ್ಲಿ ಭತ್ತ, ಜೋಳ, ರಾಗಿ, ಶೇಂಗಾ, ಸೂರ್ಯಕಾಂತಿ ತೊಗರಿ, ತೆಂಗು, ಇನ್ನಿತರೆ ಬೆಳೆಗಳನ್ನು ಬೆಳೆಯುವುದು ಸಾಮಾನ್ಯ. ಆದರೆ ಶ್ರವಣಬೆಳಗೊಳ ಹೋಬಳಿಯ ಬೆಕ್ಕ ಗ್ರಾಮದ ಸಾವಯವ ಹಸಿರುವನದ ಕೃಷಿಕ ಬಿ. ರಾಘವೇಂದ್ರ, ಪರಿಸರ ಕಾಪಾಡುವುದರ ಜೊತೆಗೆ ಅಮೂಲ್ಯ ಔಷಧಿ ಸಸ್ಯ, ಇನ್ನಿತರೆ ಮರಗಿಡ ಬೆಳೆಸುವ ಮೂಲಕ ಪಕ್ಷಿಗಳಿಗೂ ಆಶ್ರಯ ಒದಗಿಸಿದ್ದಾರೆ.
20 ಎಕರೆ ಜಮೀನಿನಲ್ಲಿ ಇಂಗು ಗುಂಡಿ, ತೆರೆದ ಬಾವಿ, 4 ಕೊಳವೆ ಬಾವಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಸಾವಿರ ತೆಂಗಿನಮರಗಳು, ಅನೇಕ ರೀತಿಯ ಅಮೂಲ್ಯ ಆಯುರ್ವೇದ ಔಷಧಿ ಸಸ್ಯಗಳು ಸೇರಿದಂತೆ ಹಲವು ಬಗೆಯ ಮರಗಳನ್ನು ಬೆಳೆಸಿದ್ದು, ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ.
ಮಳೆಗಾಲದಲ್ಲಿ ಪೋಲಾಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ತಮ್ಮ ತೋಟದ ಮೂಲೆ ಮೂಲೆಗಳಲ್ಲಿ 200 ಅಡಿ ಉದ್ದ, 100 ಅಡಿ ಅಗಲ, 10 ಅಡಿ ಆಳದ ಕೃಷಿ ಹೊಂಡ, ತೆರೆದ ಬಾವಿಗಳನ್ನು ನಿರ್ಮಿಸಿದ್ದು, ಇರುವ 4 ಕೊಳವೆ ಬಾವಿಗಳಲ್ಲೂ ಅಂತರ್ಜಲ ಹೆಚ್ಚಾಗಿದೆ. ಶಾಶ್ವತ ನೀರು ಇರುವಂತೆ ಮಾಡಿದ್ದರಿಂದಾಗಿ, ತೆಂಗಿನ ತೋಟ, ಸಸ್ಯಗಳು, ಹೂವು– ಹಣ್ಣಿನ ಗಿಡಗಳು ಮರವಾಗಿ ಬೆಳೆಯುತ್ತಿವೆ.
ರಾಘವೇಂದ್ರ ಅವರ ದೂರದೃಷ್ಟಿಯಿಂದಾಗಿ 4 ಕೊಳವೆ ಬಾವಿಗಳಲ್ಲಿ 5 ಇಂಚು ನೀರು ಸದಾ ಬರುತ್ತದೆ. ಈ ನೀರನ್ನು ಬಳಸಿಕೊಂಡು ಬರಗಾಲದಲ್ಲಿಯೂ ತೆಂಗಿನ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಈ ಕಾಯಿಗಳಿಂದ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಿ, ಅಲ್ಲಿಯೂ ಆದಾಯ ಗಳಿಸುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.
ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಸದೇ, ಜಮೀನಿನಲ್ಲಿ ಬಿದ್ದು ಹಾಳಾಗುವ ತೆಂಗಿನ ಗರಿ, ಹುಲ್ಲು, ಕಸ ಕಡ್ಡಿ ಉಪಯೋಗಿಸಿಕೊಂಡು ಕಾಂಪೊಸ್ಟ್ ಗೊಬ್ಬರ ತಯಾರಿಸಿ, ಅದನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮರಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬರುತ್ತಿಲ್ಲ. ಅಲ್ಲದೇ ಮರ ಒಂದರಲ್ಲಿ ವರ್ಷಕ್ಕೆ ಸರಾಸರಿ 180 ರಿಂದ 215 ಕಾಯಿಗಳ ಇಳುವರಿ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಔಷಧಿ ಸಸ್ಯಗಳಾದ ನಿಂಬೆ, ಸೊಳ್ಳೆ ಹುಲ್ಲು, ಒಂದೆಲಗ, ಭೃಂಗರಾಜ, ಲಕ್ಕಿಸೊಪ್ಪು, ಬಿಳಿ ಗುಲಗಂಜಿ, ರುದ್ರಾಕ್ಷಿ ಗಿಡ, ಉತ್ತರಾಣಿ, ಅತ್ತಿ ಆಲ, ಮುತ್ತಗ, ಕದಿರ, ಅರಳಿ, ಬಿಳಿ ಎಕ್ಕದ ಗಿಡ, ದರ್ಬೆ, ಗರಿಕೆ, ಬನ್ನಿ ಗಿಡ, ಆಯುರ್ವೇದದ 10 ದಶಮೂಲಗಳೊಂದಿಗೆ 200 ಹೊಂಗೆ ಸಸಿ, 100 ನೇರಳೆ, 150 ಗಂಧ, 50 ರಾಮಫಲ, 100 ಬೆಟ್ಟದ ನೆಲ್ಲಿ, 200 ತೇಗ, 100 ಸಿಲ್ವರ್, 80 ಬೇವು, 50 ಸೀಬೆ, 50 ಅಂಜೂರ, 50 ನುಗ್ಗೆ, 50 ಬಿದಿರು, 50 ಅಗಸೆ ಗಿಡ, ಪಪ್ಪಾಯ, ಲಾವಂಚ, ಆಡುಸೋಗೆ, ಮಧುನಾಶಿನಿ, ಕುಂಕುಮದಗಿಡ, ಮಾವು, ಹಲಸು, ಸೀತಾ ಅಶೋಕ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೇ ತೋಟದ ಮಧ್ಯೆ, ಬದುಗಳಲ್ಲಿ ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ಹಾಕಿ ಅದರಿಂದಲೂ ಆದಾಯ ಗಳಿಸುತ್ತಿದ್ದಾರೆ.
ಅರಣ್ಯ ಬೆಳೆಸದೇ ಇದ್ದರೆ ಮುಂದೊಂದು ದಿನ ಮನುಷ್ಯ ಕುಡಿಯುವ ನೀರಿಗೂ ಅಲೆಮಾರಿಗಳಂತೆ ಅಲೆಯಬೇಕಾಗುತ್ತದೆಬಿ.ರಾಘವೇಂದ್ರ ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ
ನಿಸರ್ಗದ ರಕ್ಷಣೆಯಿಂದ ಮಾತ್ರ ಆರೋಗ್ಯವಂತ ಜೀವನ ನಡೆಸಬಹುದಾಗಿದ್ದು ರಾಘವೇಂದ್ರ ಅವರು ಸಸ್ಯ ಸಂಪತ್ತನ್ನು ಬೆಳೆಸಿ ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿದ್ದಾರೆ. ಇದನ್ನು ವ್ಯಾಪಕವಾಗಿ ಪರಿಚಯಿಸುವ ಕಾರ್ಯವಾಗಬೇಕುಸಿ.ಎನ್. ಬಾಲಕೃಷ್ಣ ಶಾಸಕ
ಜೀವ ವೈವಿಧ್ಯ ಉಳಿಯಬೇಕಾದರೆ ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ. ಸಾವಯವ ಕೃಷಿಕ ಬಿ. ರಾಘವೇಂದ್ರ ಅವರ ಪರಿಸರದ ಕಾಳಜಿಯೇ ನಮ್ಮೂರಿಗೆ ಹೆಮ್ಮೆಬಿ.ಎನ್.ಕೇಶವಮೂರ್ತಿ ಬೆಕ್ಕ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.