ADVERTISEMENT

ಆಲೂರು | ನಾಲ್ಕೂವರೆ ತಿಂಗಳಿಗೆ ಶುಂಠಿ ಕೀಳುತ್ತಿರುವ ರೈತರು

ನಿರಂತರ ಮಳೆಯಿಂದ ಕೊಳೆರೋಗದ ಆತಂಕ: ರೈತರಿಗೆ ನಷ್ಟದ ಚಿಂತೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 6:15 IST
Last Updated 28 ಜುಲೈ 2024, 6:15 IST
ಆಲೂರು ಕಸಬಾ ಮರಸು ಹೊಸಳ್ಳಿಯ ರೈತ ದರ್ಶನ್ ಅವರು ಗದ್ದೆಯಲ್ಲಿ ನೀರು ತುಂಬಿದ್ದರಿಂದ ಶುಂಠಿ ಕಿತ್ತು ಹಾಕಿದ್ದಾರೆ
ಆಲೂರು ಕಸಬಾ ಮರಸು ಹೊಸಳ್ಳಿಯ ರೈತ ದರ್ಶನ್ ಅವರು ಗದ್ದೆಯಲ್ಲಿ ನೀರು ತುಂಬಿದ್ದರಿಂದ ಶುಂಠಿ ಕಿತ್ತು ಹಾಕಿದ್ದಾರೆ   

ಆಲೂರು: 15 ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗಿದ್ದು, ಗದ್ದೆ ಮತ್ತು ಸಮತಟ್ಟು ಪ್ರದೇಶದಲ್ಲಿ ನಾಟಿ ಮಾಡಿದ್ದ ಶುಂಠಿ ಬೆಳೆಯಲ್ಲಿ ನೀರು ತುಂಬಿಕೊಂಡಿದೆ. ಕೊಳೆ ರೋಗ ಬರುವ ಸಾಧ್ಯತೆ ಇರುವುದರಿಂದ ರೈತರು ಈಗಲೇ ಶುಂಠಿ ಕೀಳಲು ಪ್ರಾರಂಭಿಸಿದ್ದಾರೆ.

ಶುಂಠಿ ಬೆಳೆಯಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಲಾಗುತ್ತದೆ. 15 ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಗದ್ದೆಗಳಲ್ಲಿ ನೀರು ಅಧಿಕವಾಗಿ ತುಂಬಿತ್ತು. ನೀರನ್ನು ಹೊರಕ್ಕೆ ಹಾಯಿಸಲು ಸಾಧ್ಯವಾಗದೇ, 10 ದಿನಗಳಿಂದ ಶುಂಠಿ ನೀರಿನಲ್ಲಿ ನಿಂತಿದೆ. ನಂತರದಲ್ಲಿ ಬಿಸಿಲು ಬಂದರೆ, ಕೊಳೆ ರೋಗ ಆರಂಭವಾಗುತ್ತದೆ. ಈ ಕಾರಣದಿಂದ ಭೂಮಿಯಲ್ಲಿ ಬಲಿಯುವ ಮುನ್ನವೇ ಕೀಳಲು ಪ್ರಾರಂಭಿಸಿದ್ದೇವೆ ಎಂದು ರೈತರು ಹೇಳಿದ್ದಾರೆ.

‘ಈಗಾಗಲೇ ಶುಂಠಿ ನಾಟಿ ಮಾಡಿ 4–5 ತಿಂಗಳಾಗಿವೆ. 8–9 ತಿಂಗಳವರೆಗೆ ಭೂಮಿಯಲ್ಲಿದ್ದರೆ ಮಾತ್ರ ಚೆನ್ನಾಗಿ ಬಲಿಯುತ್ತದೆ. ನಂತರ ಕಿತ್ತರೆ ಮಾತ್ರ ಉತ್ತಮ ಇಳುವರಿಯೊಂದಿಗೆ ಗುಣಮಟ್ಟದ ಶುಂಠಿ ದೊರಕುತ್ತದೆ. ಈಗಲೇ ಕಿತ್ತರೆ ಗುಣಮಟ್ಟ ಕ್ಷೀಣಿಸುವುದಲ್ಲದೇ, ಇಳುವರಿ ಕುಂಠಿತವಾಗುತ್ತದೆ. ಉತ್ತಮ ಬೆಲೆಯೂ ಸಿಗುವುದಿಲ್ಲ’ ಎಂದು ರೈತ ವೆಂಕಟೇಶ್‌ ತಿಳಿಸಿದರು.

ADVERTISEMENT

‘ಒಂದು ಚೀಲ ಶುಂಠಿ ನಾಟಿ ಮಾಡಿ ಬೆಳೆಯುವವರೆಗೆ, ಕನಿಷ್ಠ ₹20 ಸಾವಿರದಿಂದ ₹25 ಸಾವಿರ ಖರ್ಚಾಗುತ್ತದೆ. ಕೃಷಿ ಕಾರ್ಮಿಕರ ಅಭಾವದಿಂದ ಎರಡು ಪಟ್ಟು ಸಂಬಳ ಕೊಟ್ಟು ಕೆಲಸ ಮಾಡಿಸಬೇಕಾಗುತ್ತದೆ. ಉತ್ತಮ ಬೆಳೆ ಬಂದರೆ ಗರಿಷ್ಠ 15-20 ಮೂಟೆ ಇಳುವರಿ ಸಿಗುತ್ತದೆ. ರೋಗ ಬಂದರೆ, 10-12 ಮೂಟೆ ದೊರಕಬಹುದು. ಮಾರುಕಟ್ಟೆಯಲ್ಲಿ ಒಂದು ಮೂಟೆಗೆ ₹3 ಸಾವಿರದಿಂದ ₹4 ಸಾವಿರ ದೊರಕಿದರೆ ಮಾತ್ರ ರೈತರ ಪ್ರಯತ್ನಕ್ಕೆ ಲಾಭ ದೊರಕುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ’ ಎನ್ನುವುದು ರೈತರ ಮಾತು.

ಕಳೆದ ವರ್ಷ ಒಂದು ಚೀಲ ಶುಂಠಿಗೆ ₹6 ಸಾವಿರಕ್ಕೂ ಅಧಿಕ ಬೆಲೆ ದೊರಕಿತ್ತು. ಹೀಗಾಗಿ ತಾಲ್ಲೂಕಿನ 3 ಸಾವಿರ ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ. ಸದ್ಯ ಒಂದು ಮೂಟೆಗೆ ₹2 ಸಾವಿರ ಬೆಲೆ ಇದೆ.

ಶುಂಠಿ ಬೆಳೆ ಜೂಜಾಟವಿದ್ದಂತೆ’ ‘ಶುಂಠಿ ಬೆಳೆಯುವುದು ಜೂಜಾಟ ಆಡಿದಂತೆಯೇ ಸರಿ. ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಭಾರಿ ಏರಿಳಿತ ಆಗುತ್ತಿರುತ್ತದೆ’ ಎಂದು ಮರಸುಹೊಸಳ್ಳಿ ರೈತ ದರ್ಶನ್‌ ಹೇಳುತ್ತಾರೆ. ‘50 ಮೂಟೆ ಶುಂಠಿ ಬೆಳೆ ಮಾಡಿ ನಾಲ್ಕೂವರೆ ತಿಂಗಳಾಗಿತ್ತು. ಭಾರಿ ಮಳೆಯಿಂದ ನೀರು ತುಂಬಿದೆ. ಕೊಳೆಯುವ ಮುನ್ನ ಕೀಳಲಾಗಿದೆ. ಒಂದು ಮೂಟೆಗೆ 9 ಮೂಟೆ ಇಳುವರಿ ಸಿಕ್ಕಿದೆ. ಒಂದು ಮೂಟೆಗೆ ₹2 ಸಾವಿರ ದರ ಸಿಕ್ಕರೂ ಎಕರೆಗೆ ಕನಿಷ್ಠ ₹2 ಲಕ್ಷ ನಷ್ಟವಾಗುತ್ತಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.