ಪ್ರಜಾವಾಣಿ ವಾರ್ತೆ
ಆಲೂರು: ‘ಸರ್ಕಾರಗಳು ಸಾಲ ಮನ್ನಾ ಮಾಡುತ್ತವೆ ಎಂಬ ಮನೋಭಾವನೆಯಿಂದ ರೈತರು ಹೊರಬಂದು ಸಹಕಾರಿ ಬ್ಯಾಂಕ್‌ಗಳ ಪ್ರಗತಿಗೆ ಸಹಕರಿಸಬೇಕು’ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಬಿ.ಕೆ. ಲಿಂಗರಾಜು ತಿಳಿಸಿದರು.
ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಹಕಾರ ಬ್ಯಾಂಕ್‌ಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಕಳೆದ ವರ್ಷ ₹50 ಲಕ್ಷ ನಿವ್ವಳ ಲಾಭದಲ್ಲಿದ್ದ ಬ್ಯಾಂಕು, ಪ್ರಸ್ತುತ ವರ್ಷದಲ್ಲಿ ₹70 ನಷ್ಟದಲ್ಲಿದೆ. ಸಾಲ ಪಡೆದ ರೈತರು ಸೂಕ್ತ ಸಮಯಕ್ಕೆ ಮರುಪಾವತಿ ಮಾಡದಿರುವುದು ಹಾಗೂ ಸರ್ಕಾರಗಳು ಸಾಲ ಮನ್ನಾ ಮಾಡುತ್ತವೆ ಎಂಬ ಭಾವನೆ ಇಟ್ಟುಕೊಂಡು ಹಲವು ರೈತರು ಸಾಲವನ್ನು ಮರುಪಾವತಿ ಮಾಡುವ ಗೋಜಿಗೆ ಹೋಗುವುದಿಲ್ಲ. ಇದು ಬ್ಯಾಂಕಿನ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.
ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ನಮ್ಮ ಬ್ಯಾಂಕಿನ ಅಸ್ತಿತ್ವ ಉಳಿಯುತ್ತದೆ. ಇಲ್ಲದಿದ್ದರೆ ಬ್ಯಾಂಕಿನ ಸ್ಥಿತಿ ಚಿಂತಾಜನಕವಾಗುತ್ತದೆ. ಸಾಲ ಪಡೆದ ರೈತರು ನಿಗದಿತ ಅವಧಿಯೊಳಗೆ ಮರುಪಾವತಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಎಚ್.ಸಿ.ಶಾಂತಕೃಷ್ಣ ಮಾತನಾಡಿ, ‘ಈಗಾಗಲೇ ಸುಮಾರು ಮೂರು ಕೋಟಿಯಷ್ಟು ಸಾಲ ನೀಡಲಾಗಿದೆ ಅದರೆ ಮರುಪಾವತಿ ಯಾಗುತ್ತಿಲ್ಲ. ಸಾಲ ಪಡೆದವರು ಸಬೂಬು ಹೇಳದೆ ಮರುಪಾವತಿಸಿ ಸಂಘದ ಏಳಿಗೆಗೆ ಸಹಕರಿಯಾಗಬೇಕು’ ಎಂದರು.
ಬ್ಯಾಂಕಿನ ಮಾಜಿ ನಿರ್ದೇಶಕ ಬಿ.ಸಿ. ಶಂಕರಾಚಾರ್ ಮಾತನಾಡಿ, ‘ರೈತರು ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆದು ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಹಕಾರ ಬ್ಯಾಂಕ್‌ಗಳಲ್ಲಿ ಶೇ 3ರ ಬಡ್ಡಿ ದರದಲ್ಲಿ ರೈತರಿಗೆ ತಮ್ಮ ಕೃಷಿ ಚಟುವಟಿಕೆಗೆ ಸಾಲ ನೀಡುತ್ತಿದೆ’ ಎಂದರು.
ಬ್ಯಾಂಕ್ ಉಪಾಧ್ಯಕ್ಷೆ ತುಳಸಮ್ಮ, ನಿರ್ದೇಶಕರಾದ ಎಚ್.ಸಿ ಶಾಂತಕೃಷ್ಣ, ಎಂ.ಎಚ್. ರಂಗೇಗೌಡ, ಜಿ.ಆರ್. ರಾಮೇಗೌಡ, ರಂಗಯ್ಯ, ನಿಂಗಮ್ಮ, ರಾಧಮ್ಮ, ಎಂ.ಕೆ. ಜಗದೀಶ್, ಜಾರ್ಜ್ ಡಿ. ಕಾಸ್ಟ, ಎಂ.ಎ. ನಿಂಗರಾಜು, ಬಿ.ಸಿ. ಸುನಿಲ್ ಕುಮಾರ್, ಸಿ.ಪಿ. ಧರಣೇಶ್, ಐ.ಎನ್. ನಿರಂಜನ್, ವ್ಯವಸ್ಥಾಪಕ ಯಲ್ಲಪ್ಪ ಮಾದರ, ಜಿ.ಎಸ್. ಶಕುಂತಲಾ, ಬಿ.ಸಿ. ಶಂಕರಾಚಾರ್, ರಾಜಪ್ಪಗೌಡ, ಮಂಜೇಗೌಡ, ನಿವೃತ್ತ ಶಿಕ್ಷಕ ರಾಮಚಂದ್ರ, ಯೋಗೇಶ್, ಕೆ.ವಿ. ಮಲ್ಲಿಕಾರ್ಜುನ್, ಸಿಬ್ಬಂದಿ ಎನ್.ಕುಮಾರ್, ರಾಜು, ತನುಜ, ಸೌಮ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.