ADVERTISEMENT

ಅರಕಲಗೂಡಿನಲ್ಲಿ ರೈತರ ಪ್ರತಿಭಟನೆ:ಬೆಲೆ ಏರಿಕೆ, ವಿವಿಧ ಸಮಸ್ಯೆ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:17 IST
Last Updated 9 ಮೇ 2025, 14:17 IST
ಬೆಲೆ ಏರಿಕೆ ಖಂಡಿಸಿ ಅರಕಲಗೂಡು ಅನಕೃ ವೃತ್ತದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು
ಬೆಲೆ ಏರಿಕೆ ಖಂಡಿಸಿ ಅರಕಲಗೂಡು ಅನಕೃ ವೃತ್ತದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು   

ಅರಕಲಗೂಡು: ಕೃಷಿಕರಿಗೆ ಅಗತ್ಯವಾದ ಪರಿಕರಗಳ ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅನಕೃ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಧರಣಿ ನಡೆಸಿದರು.

ಈಗಾಗಲೇ ಮಳೆಯಾಗಿದ್ದು ಕೆಲವು ಬೆಳೆಗಳ ಬಿತ್ತನೆ ಆರಂಭಗೊಂಡಿದೆ. ರೈತರಿಗೆ ಅಗತ್ಯವಾಗಿ ಬೇಕಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಅಧಿಕವಾಗಿ ಜನಸಾಮಾನ್ಯರಿಗೆ ಹೊರೆಯಾಗಿದೆ. ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ, ಬದಲಾಗಿ ಶೋಷಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗಂಗನಾಳು ಏತನೀರಾವತಿ ಯೋಜನೆಯಿಂದ ಬೇಸಿಗೆ ಕಾಲದಲ್ಲಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಬೇಸಿಗೆ ಆರಂಭಗೊಂಡು ಮೂರು ತಿಂಗಳು ಕಳೆದರೂ ಕೂಡ ನೀರು ಹರಿಸಿಲ್ಲ. ಕೂಡಲೇ ಕೆರೆ ಕಟ್ಟೆಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ರೈತರಿಗೆ ವಿವಿಧ ಇಲಾಖೆಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ಕರೆಯುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ತಿಂಗಳು ಕಳೆದಿದ್ದರೂ ಕೂಡ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯಲ್ಲಿ ಗಿಡ ನೆಟ್ಟಿರುವ ರೈತರಿಗೆ ಇದುವರೆಗೂ ಹಣ ಬಂದಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಲ್ಲಿ ಸಿಗಬೇಕಾದ ಸವಲತ್ತುಗಳು ಪ್ರಾಮಾಣಿಕ ರೈತರಿಗೆ ಸಿಗದೇ ಉಳ್ಳವರ ಪಾಲಾಗುತ್ತಿವೆ. ಖಾಸಗಿ ಆಗ್ರೋ ಕೇಂದ್ರಗಳಿಂದ ಕಳಪೆ ಬೀಜ, ಕೀಟನಾಶಕ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕವಾಗಿ ವಿದ್ಯುತ್ ಸರಬರಾಜಾಗದ ಕಾರಣ ರೈತರು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆ ಒಣಗಿ ಹೋಗುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಕವಾದ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯಬೇಕಾಗಿದೆ ಎಂದು ಆರೋಪಿಸಿ ವಿವಿಧ ಇಲಾಖೆಗಳಿಂದ ರೈತರು, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹಾಜರಿದ್ದ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಮುಖಂಡರಾದ ಹೊಂಬೇಗೌಡ, ಜಗದೀಶ್, ಭುವನೇಶ್, ರವಿ, ಮಂಜಣ್ಣ, ವೀರೇಂದ್ರ, ಕೃಷ್ಣೇಗೌಡ, ಚಲುವೇರಾಜೆ ಅರಸು, ಲಕ್ಷ್ಮಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.