ADVERTISEMENT

ಕಣಗುಪ್ಪೆ ಗ್ರಾಮದಲ್ಲಿ ರೈತರ ಪ್ರತಿಭಟನೆ

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಇಲಾಖೆ ವಿಫಲ: ಬೆಳೆಗಾರರು, ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:35 IST
Last Updated 11 ಡಿಸೆಂಬರ್ 2025, 2:35 IST
ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಬೇಲೂರು: ‘ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದರೂ ಅರಣ್ಯ ಸಚಿವರು ಮತ್ತು ಇಲಾಖೆ ನಿರ್ಲಕ್ಷ್ಯ ವಹಿಸಿವೆ’ ಎಂದು ಆರೋಪಿಸಿ ತಾಲ್ಲೂಕಿನ ಕಣಗುಪ್ಪೆ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಕಣಗುಪ್ಪೆ, ಅನುಘಟ್ಟ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸೇರಿ, ರಸ್ತೆ ತಡೆ ನಡೆಸಿ, ಅರಣ್ಯ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಕಣಗುಪ್ಪೆ ಕುಮಾರ್ ಮಾತನಾಡಿ, ‘ಅನುಘಟ್ಟ ಭಾಗದಲ್ಲಿ ಸುಮಾರು 20 ದಿನಗಳಿಂದ 30ಕ್ಕೂ ಹೆಚ್ಚು ಕಾಡಾನೆಗಳಿದ್ದು, ನೂರಕ್ಕೂ ಹೆಚ್ಚು ಎಕರೆಯ ಭತ್ತ, ಕಾಫಿ, ಶುಂಠಿ, ತೆಂಗು ಸೇರಿದಂತೆ ಇನ್ನಿತರ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಭಾಗಕ್ಕೆ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿಯೂ ಬಂದಿಲ್ಲ. ಸಾವು ನೋವಾದಾಗ ಮಾತ್ರ ಬರುವ ಅರಣ್ಯ ಇಲಾಖೆ ಅಧಿಕಾರಿಗಳು, ಬೆಳೆಗಾರರ ಸಂಕಷ್ಟ ಅರಿಯಲು ಕನಿಷ್ಠ ಸೌಜನ್ಯಕ್ಕೂ ಬಂದಿಲ್ಲ. ಅರಣ್ಯ  ಸಚಿವರು ಹಾಗೂ ಅವರ ಇಲಾಖೆ ನಿದ್ರೆಗೆ ಮಾತ್ರ ಸೀಮಿತರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಹಾಗೂ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ‘ಅನುಘಟ್ಟ ಪಂಚಾಯಿತಿ ವ್ಯಾಪ್ತಿಯ ಕಣಗುಪ್ಪೆ ಬೆಳ್ಳಾವರ, ಹಿರೆಹಸಡೆ, ಚಿಕ್ಕಹಸಡೆ, ಡೋಲನಮನೆ, ನೇರಳಕಟ್ಟೆ ಸೇರಿದಂತೆ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ, ದಿನಕ್ಕೆ ಹೆಚ್ಚುತ್ತಿದೆ. ಆದರೆ ಈ ಭಾಗದ ಸಮಸ್ಯೆಗಳನ್ನು ಆಲಿಸುವಲ್ಲಿ ಇಲ್ಲಿಯ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ರೈತರು, ಬೆಳೆಗಾರರ ಕಣ್ಣೊರೆಸುವ ನಾಟಕದ ಸಭೆ ಕರೆಯುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಈ ಸಮಸ್ಯೆಗೆ ಪರಿಹಾರ ನೀಡಲು ಸಭೆ ಕರೆದು ಮೂರು ತಿಂಗಳಾದರೂ ಕೇವಲ ಅದು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಅದು ಇಲ್ಲಿವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ನಾವು ಎಷ್ಟೇ ಬಾರಿ ಪ್ರತಿಭಟನೆ ಮಾಡಿ, ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ತಿಳಿಸಿದರೂ, ಈ ಬಗ್ಗೆ ಸಚಿವರಿಗೆ ಕೇಳದಂತಾಗಿದೆ ಎಂದರು.

ಈಗಾಗಲೇ ಹೆತ್ತೂರು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಸುಮಾರು ಮೂರು ಸಾವಿರ ಎಕರೆಯಷ್ಟು ಅರಣ್ಯ ಜಾಗವನ್ನು ನಾವೇ ಗುರ್ತಿಸಿದ್ದರೂ, ಅಲ್ಲಿಗೆ ಆನೆಗಳನ್ನು ಅಟ್ಟಲು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಶಾರೀಬ್ ಫರ್ಹಾನ್ , ಅನುಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಶೆಟ್ಟಿ, ಬಸವರಾಜ್ ಮಾತನಾಡಿದರು. ಸತೀಶ್, ಚಂದನ್, ವೆಂಕಟೇಶ್ ದೇವರಾಜು, ಮಂಜುನಾಥ್, ಶಿವಶಂಕರಪ್ಪ, ಲಲಿತಾ, ಇಂದಿರಾ, ಲೋಹಿತ್, ವಿನಯ್, ರಾಮಶೆಟ್ಟಿ, ತೇಜಸ್, ವೆಂಕಟೇಶ್, ರವಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.