ADVERTISEMENT

ಅಂಚೆ ವಸ್ತು ಭಂಡಾರ ಸ್ಥಳಾಂತಕ್ಕೆ ರೈತಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:28 IST
Last Updated 1 ಸೆಪ್ಟೆಂಬರ್ 2020, 7:28 IST
ಅರಸೀಕೆರೆ ಭಾರತೀಯ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸದಂತೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು
ಅರಸೀಕೆರೆ ಭಾರತೀಯ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸದಂತೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು   

ಅರಸೀಕೆರೆ: ನಗರದಲ್ಲಿರುವ ಭಾರತೀಯ ಅಂಚೆ ಇಲಾಖೆಯ ವಸ್ತು ಭಂಡಾರವನ್ನು ಬೆಂಗಳೂರಿಗೆ ವರ್ಗಾಯಿಸದೇ ನಗರದಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಕನ್ನಕಂಚೇನಹಳ್ಳಿ ಪ್ರಸನ್ನಕುಮಾರ್ ಮನವಿ ಸಲ್ಲಿಸಿದರು.

ನಗರದ ಶಿವಾನಂದ ಕಾಲೊನಿಯಲ್ಲಿರುವ ಭಾರತೀಯ ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ಭಾರತೀಯ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರದ ಜನರಲ್ ಮ್ಯಾನೇಜರ್ ಡಿಎಸ್‌ವಿಆರ್ ಮೂರ್ತಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅರಸೀಕೆರೆ ತೆಂಗು ಬೆಳೆಯುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇದರ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಗರದಲ್ಲಿ ರೈಲ್ವೆ, ಅಂಚೆ, ದೂರವಾಣಿ ಸಂಪರ್ಕ ಕೇಂದ್ರ ಸೇರಿದಂತೆ ಇನ್ನಿತರ ಇಲಾಖೆಗಳ ಕಚೇರಿ ಸ್ಥಾಪಿಸಿ ಸೇವೆ ಸಲ್ಲಿಸಿ ವಿವಿಧ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನ ಜನತೆಯ ಸೇವೆ ಮಾಡುತ್ತಿದೆ, ಇದು ತಾಲ್ಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದರು.

‘ಅರಸೀಕೆರೆ ನಗರದಲ್ಲಿರುವ ಅಂಚೆ ವಸ್ತು ಭಂಡಾರವನ್ನು ಬೆಂಗಳೂರಿಗೆ ವರ್ಗಾಯಿಸುತ್ತಿರುವುದು ಸೂಕ್ತವಲ್ಲ. ಭಾರತೀಯ ಅಂಚೆ ವಸ್ತು ಭಂಡಾರ ರಾಜ್ಯದಲ್ಲಿ ಹುಬ್ಬಳ್ಳಿ, ಅರಸೀಕೆರೆ ಮತ್ತು ಬೆಂಗಳೂರುಗಳಲ್ಲಿ 3 ವಿಭಾಗಗಳ ಶಾಖೆಯನ್ನು ಸ್ಥಾಪಿಸಿದ್ದು ಅರಸೀಕೆರೆ ಅಂಚೆ ವಸ್ತು ಭಂಡಾರದಿಂದ ರಾಜ್ಯದ ಮಂಗಳೂರು, ಉಡುಪಿ, ದಾವಣಗೆರೆ, ಮಂಡ್ಯ., ಮೈಸೂರು , ನಂಜನಗೂಡು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಸೇರಿದಂತೆ ರಾಜ್ಯದ 14 ವಿಭಾಗಗಳಿಗೆ ಅಂಚೆ ಸೇವೆಯ ಜತೆಗೆ ಅಗತ್ಯವಿರುವ ಸರಕುಗಳನ್ನು ಅರಸೀಕೆರೆ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರದಿಂದ ಸೇವೆ ಸಲ್ಲಿಸುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಅರಸೀಕೆರೆ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರವನ್ನು ಬೇರೆಡೆಗೆ ವರ್ಗಾಯಿಸದೇ ಅರಸೀಕೆರೆ ನಗರದಲ್ಲೇ ಉಳಿಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಸಲ್ಲಿಸಿದರು.

ADVERTISEMENT

‘ಈಗಾಗಲೇ ಅರಸೀಕೆರೆ ತಹಶೀಲ್ದಾರ್ ಮೂಲಕವೂ ಕೇಂದ್ರ ದೂರಸಂಪರ್ಕ ಖಾತೆ ಸಚಿವರಿಗೂ ಮನವಿ ಸಲ್ಲಿಸಲಾಗಿದೆ’ ಎಂದರು.

ರೈತ ಮುಖಂಡರಾದ ಬಿ.ವೈ.ಉಮೇಶ್, ಗಂಡಸಿ ಹೋಬಳಿಯ ರೈತ ಮುಖಂಡರಾದ ಮಂಜುಳಾ, ರಘು, ಸಿದ್ದಪ್ಪ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.