
ಹಾಸನ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಹೊಸ ಉಡುಪುಗಳನ್ನು ತೊಟ್ಟ ಕ್ರಿಶ್ಚಿಯನ್‌ರು ಚರ್ಚ್‌ಗಳಿಗೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರದ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಕ್ರಿಸ್‌ಮಸ್ ಆಚರಣೆಯಲ್ಲಿ ಪಾಲ್ಗೊಂಡು ಕ್ರೈಸ್ತ ಸಮುದಾಯದವರಿಗೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬದ ಆಚರಣೆ ಕ್ರೈಸ್ತ ಸಮುದಾಯದವರಿಗೆ ಇಂದು ಅತ್ಯಂತ ಪವಿತ್ರವಾದ ದಿನ. ಜಿಲ್ಲೆಯ ಸಮಸ್ತ ಜನತೆಗೆ ಕ್ರಿಸ್‌ಮಸ್ ಹಾಗೂ ಮುಂಬರುವ ಹೊಸ ವರ್ಷದ ಶುಭಾಶಯ. ಯೇಸು ಎಲ್ಲರಿಗೂ ಒಳಿತನ್ನು ಮಾಡಲಿ. ದೇಶದಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಎಂದು ಹಾರೈಸಿದರು.
ಕ್ರಿಶ್ಚಿಯನ್ ಶಾಲೆಯಲ್ಲಿಯೇ ಪ್ರಾಥಮಿಕ ಹಂತದಿಂದಲೂ ವಿದ್ಯಾಭ್ಯಾಸ ಮಾಡಿರುವುದಾಗಿ ನೆನೆದ ಶ್ರೇಯಸ್, ಚರ್ಚ್‌ಗಳ ಹಾಗೂ ಶಾಲೆಯ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಪ್ರೀತಿ, ಸಹಬಾಳ್ವೆ, ಸೌಹಾರ್ದ ಸಮಾಜ ನಿರ್ಮಾಣದ ಕಡೆ ಹೆಚ್ಚು ಒಲವು ಬೆಳೆಸಿಕೊಂಡೆ ಎಂದು ಹೇಳಿದರು.
ನಗರದ ಸಂತ ಆಂತೋನಿ ದೇವಾಲಯದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಫಾ. ಪ್ಯಾಟ್ರಿಕ್ ಜಯರಾಮ್, ಕ್ರಿಸ್‌ಮಸ್ ಎಂದರೆ ಯೇಸು ಕ್ರಿಸ್ತನ ಜನನದ ಹಬ್ಬವಾಗಿದ್ದು, ಪ್ರತಿ ವರ್ಷ ಡಿಸೆಂಬರ್ 25ರ ಮಧ್ಯರಾತ್ರಿಯಿಂದಲೇ ಯಾವುದೇ ಮತ ಭೇದವಿಲ್ಲದೇ ಎಲ್ಲರೂ ಪ್ರೀತಿ ಹಾಗೂ ಸೌಹಾರ್ದದಿಂದ ಆಚರಿಸಲಾಗುತ್ತದೆ. ಹಲವು ದೇಶಗಳಲ್ಲಿ ಇದು ವಿಶಿಷ್ಟ ಸಾಂಸ್ಕೃತಿಕ ಹಬ್ಬವಾಗಿ ರೂಪಗೊಂಡಿದೆ ಎಂದರು.
ವಿಶೇಷವಾಗಿ ದೇಶದ ರೈತಾಪಿ ಜನರು, ಕಾರ್ಮಿಕ ವರ್ಗದವರಿಗೆ ಹಾಗೂ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ತರಲಿ. ಎಲ್ಲ ಸಮುದಾಯದವರಲ್ಲಿ ಸಹಬಾಳ್ವೆ ಮನೋಭಾವ ನೆಲೆಯೂರಲಿ ಎಂದು ಯೇಸುವಿನಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಕ್ರಿಸ್‌ಮಸ್ ಹಬ್ಬದ ನಿಮಿತ್ತ ಎಲ್ಲ ಚರ್ಚ್‌ಗಳಲ್ಲಿಯೂ ವಿಶೇಷ ವಿವಿಧ ಮಾದರಿಯ ಬಣ್ಣಬಣ್ಣದ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತನ ಜನನ ಹಾಗೂ ಬಾಲ್ಯದ ದಿನಗಳನ್ನು ಪರಿಚಯಿಸುವ ಗೋದಲಿಯ ನಿರ್ಮಾಣ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.