ADVERTISEMENT

ಚನ್ನರಾಪಟ್ಟಣ | ಟಿಸಿ ದುರಸ್ತಿ ಘಟಕಕ್ಕೆ ಬೆಂಕಿ: ₹ 4.35 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 26 ಮೇ 2020, 11:09 IST
Last Updated 26 ಮೇ 2020, 11:09 IST
ಚನ್ನರಾಯಪಟ್ಟಣದಲ್ಲಿರುವ ವಿದ್ಯುತ್ ಪರಿವರ್ತಕ ದುರಸ್ತಿ ಘಟಕಕ್ಕೆ ಸೋಮವಾರ ರಾತ್ರಿ ಬೆಂಕಿ ತಗುಲಿತ್ತು
ಚನ್ನರಾಯಪಟ್ಟಣದಲ್ಲಿರುವ ವಿದ್ಯುತ್ ಪರಿವರ್ತಕ ದುರಸ್ತಿ ಘಟಕಕ್ಕೆ ಸೋಮವಾರ ರಾತ್ರಿ ಬೆಂಕಿ ತಗುಲಿತ್ತು   

ಚನ್ನರಾಪಟ್ಟಣ: ಪಟ್ಟಣದಲ್ಲಿರುವ ವಿದ್ಯುತ್ ಪರಿವರ್ತಕ ದುರಸ್ತಿ ಘಟಕಕ್ಕೆ ಸೋಮವಾರ ರಾತ್ರಿ ಬೆಂಕಿ ತಗುಲಿದ ಪರಿಣಾಮ ಅಂದಾಜು ₹ 4.35 ಕೋಟಿ ನಷ್ಟ ಸಂಭವಿಸಿದೆ.

ಅನ್ನಪೂಣೇಶ್ವರಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಸೇರಿದ ಕಚ್ಚಾ ವಸ್ತುಗಳು, ತಾಮ್ರದ ತಂತಿ ಸೇರಿ ಇನ್ನಿತರೆ ಸಲಕರಣೆಗಳು ಸುಟ್ಟಿದ್ದು ಅವುಗಳ ಅಂದಾಜು ಮೌಲ್ಯ ₹ 2.35 ಕೋಟಿ ಎಂದು ಗುತ್ತಿಗೆದಾರ ಶಿವರಾಂ ತಿಳಿಸಿದರು.

ಸೆಸ್ಕ್‌ಗೆ ಸೇರಿದ ₹ 1.5 ಕೋಟಿ ಮೌಲ್ಯದ 62 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಕೆಪಿಟಿಸಿಎಲ್‌ಗೆ ಸೇರಿದ ₹ 50 ಲಕ್ಷ ವೆಚ್ಚದ ಕಟ್ಟಡಕ್ಕೆ ಹಾನಿಯಾಗಿದೆ. ಸೋಮವಾರ ರಾತ್ರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟವಾಗಿ ಹೊಗೆ ಕಾಣಿಸಿಕೊಂಡಿತು. ಕೆಲ ಹೊತ್ತಿನ ಬಳಿಕ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.ಅಷ್ಟರಲ್ಲಿ ಜ್ವಾಲೆ ಕಟ್ಟಡವನ್ನು ಆವರಿಸಿತು.

ADVERTISEMENT

ರಾತ್ರಿ 2.15 ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಮಂಗಳವಾರ ಮಧ್ಯಾಹ್ನದವರೆಗೆ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾದರು. ಕಟ್ಟಡದಲ್ಲಿ ಹೊಗೆಯಾಡುತ್ತಿದ್ದ ಸಾಮಗ್ರಿಗಳನ್ನು ಜೆಸಿಬಿ ಯಂತ್ರದಿಂದ ಬೇರ್ಪಡಿಸಿ ಬೆಂಕಿ ನಂದಿಸಲಾಯಿತು. ಬಹುತೇಕ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಂ.ಎ. ಗೋಪಾಲಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಗ್ನಿಶಾಮಕ ಠಾಣಾಧಿಕಾರಿ ಗಿಡ್ಡೇಗೌಡ, ಪಿಎಸ್ಐ ಎಲ್.ಎನ್. ಕಿರಣ್ ಕುಮಾರ್ ಭೇಟಿ ನೀಡಿದರು.

ನಿಖರ ಕಾರಣ ತಿಳಿದಿಲ್ಲ
ವಿದ್ಯುತ್ ಪರಿವರ್ತಕ ದುರಸ್ತಿ ಘಟಕದಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಸೆಸ್ಕ್ ಹಾಸನ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಸುಚೇತನ್ ತಿಳಿಸಿದರು.

ಸೆಸ್ಕ್ ಇಲಾಖೆಗೆ ₹ 2 ಕೋಟಿ ಮತ್ತು ವಿದ್ಯುತ್ ದುರಸ್ತಿ ಗುತ್ತಿಗೆದಾರ ಶಿವರಾಂ ಅವರಿಗೆ ₹ 2.35 ಕೋಟಿ ನಷ್ಟ ಸಂಭವಿಸಿದೆ. ಕೊರತೆ ಇರುವ ವಿದ್ಯುತ್ ಪರಿವರ್ತಕಗಳನ್ನು ಮೈಸೂರು, ಚಾಮರಾಜನಗರ, ಮಂಡ್ಯ ವಿಭಾಗದಿಂದ ತರಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಾರ್ಯಪಾಲಕ ಎಂಜಿನಿಯರ್ ಆರ್. ಅಂಬಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.