ADVERTISEMENT

ಶ್ರವಣಬೆಳಗೊಳ: ಚಿಕ್ಕ ಬಾಹುಬಲಿಗೆ ಪ್ರಥಮ ಮಸ್ತಕಾಭಿಷೇಕ

ಇಂದಿನಿಂದ 3 ದಿನ ಧಾರ್ಮಿಕ ಕಾರ್ಯಕ್ರಮ: ವೃಷಭನಾಥ ಸ್ವಾಮಿ ಲಘು ಪಂಚಕಲ್ಯಾಣ

ಬಿ.ಪಿ.ಜಯಕುಮಾರ್‌
Published 14 ಫೆಬ್ರುವರಿ 2025, 8:22 IST
Last Updated 14 ಫೆಬ್ರುವರಿ 2025, 8:22 IST
ಶ್ರವಣಬೆಳಗೊಳದ ಭಂಡಾರ ಬಸದಿಯ ಪ್ರಾಂಗಣದಲ್ಲಿ ಪ್ರತಿಷ್ಠಾಪನೆ ಮತ್ತು ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧಗೊಂಡಿರುವ ಬಾಹುಬಲಿ ಮೂರ್ತಿ.
ಶ್ರವಣಬೆಳಗೊಳದ ಭಂಡಾರ ಬಸದಿಯ ಪ್ರಾಂಗಣದಲ್ಲಿ ಪ್ರತಿಷ್ಠಾಪನೆ ಮತ್ತು ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧಗೊಂಡಿರುವ ಬಾಹುಬಲಿ ಮೂರ್ತಿ.   

ಶ್ರವಣಬೆಳಗೊಳ: ಇಲ್ಲಿನ ದಿಗಂಬರ ಜೈನಮಠದ ಸಮೀಪದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯ ಪ್ರಾಂಗಣದಲ್ಲಿ ವಿರಾಜಮಾನರಾಗಿರುವ ಚಿಕ್ಕ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಫೆ. 14ರಿಂದ 16ರ ವರೆಗೆ 3 ದಿನಗಳ ಕಾಲ ಧಾರ್ಮಿಕ ಲಘು ಪಂಚಕಲ್ಯಾಣ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ ತಂದೆ ವೃಷಭನಾಥ ಸ್ವಾಮಿಯ ಲಘು ಪಂಚಕಲ್ಯಾಣದ ಮಹೋತ್ಸವದ ಪೂರ್ವಭಾವಿಯಾಗಿ ಮೊದಲ ಸಲ ಹಲವು ಧಾರ್ಮಿಕ ವಿಧಿಗಳು ಪ್ರಾರಂಭವಾಗುತ್ತವೆ. ಗುರು ಪೀಠದ ಈಗಿನ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಮತ್ತು ಆಚಾರ್ಯ ಕುಂಥುಸಾಗರ ಮಹಾರಾಜರು ಹಾಗೂ ತ್ಯಾಗಿಗಳ, ಭಟ್ಟಾರಕರ ಸಾನಿಧ್ಯದಲ್ಲಿ ವೈಭವದಿಂದ ನೆರವೇರಲಿವೆ.

ಬಾಹುಬಲಿ ಸ್ವಾಮಿಯ 11.5 ಅಡಿಯ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ಪ್ರಥಮ ಮಹಾಮಸ್ತಕಾಭಿಷೇಕವು ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಕರ್ಮಯೋಗಿ ನೆರವೇರಲಿದೆ. ಏಕ ಶಿಲೆಯಲ್ಲಿ ಕೆತ್ತಲಾಗಿರುವ ವಿಸ್ಮಯಕಾರಿ ಬಾಹುಬಲಿ ಮೂರ್ತಿಯು, ಗಂಗರಸರ ದಂಡನಾಯಕ ಚಾವುಂಡರಾಯನ ಅದ್ವಿತೀಯ ಕೊಡುಗೆ. ವಿಂಧ್ಯಗಿರಿಯ ಪರ್ವತದಲ್ಲಿ ಸೌಂದರ್ಯದ ಖನಿಯಾಗಿ ವಿಶ್ವಕ್ಕೆ ಅಹಿಂಸಾ ಸಂದೇಶ ಸಾರುತ್ತ ಶಾಂತಿದೂತನಾಗಿ ನಿಂತಿದ್ದಾನೆ.

ADVERTISEMENT

ಭಗವಾನ್ ಬಾಹುಬಲಿಯು ಪ್ರಥಮ ಮೋಕ್ಷಗಾಮಿಯಾದರೂ ತೀರ್ಥಂಕರನಲ್ಲ. ಪ್ರಥಮ ತೀರ್ಥಂಕರ ವೃಷಭನಾಥರಿಂದ ಹಿಡಿದು ಮಹಾವೀರರವರೆಗೆ 24 ತೀರ್ಥಂಕರರು ಮಾತ್ರವಿದ್ದು, ಪಂಚಕಲ್ಯಾಣ ಮಹೋತ್ಸವ ತೀರ್ಥಂಕರರಿಗೆ ಮಾತ್ರ ನೆರವೇರಿಸುವ ಧಾರ್ಮಿಕ ಆಚರಣೆಯಾಗಿದೆ.

ವೃಷಭನಾಥರು ಮನುಕುಲಕ್ಕೆ ದಾರಿ ತೋರಿದವರು. ಈ ಭೋಗ ಭೂಮಿಯ ಮೇಲೆ ಕಲ್ಪವೃಕ್ಷದ ಕಾಲ ಮುಗಿದ ಮೇಲೆ, ಜನರಿಗೆ ಈ ಕರ್ಮ ಭೂಮಿಯಲ್ಲಿ ಹೇಗೆ ತಮ್ಮ ಜೀವನ ನಡೆಸಬೇಕೆಂದು ದಾರಿ ಕಾಣದಾದಾಗ, ಅಸಿ, ಮಸಿ, ಕೃಷಿ, ವಾಣಿಜ್ಯ, ಶಿಲ್ಪ ಮತ್ತು ವಿದ್ಯೆಗಳೆಂಬ 6 ವೃತ್ತಿ ತಿಳಿಸಿಕೊಟ್ಟು ಜೀವನೋಪಾಯದ ಮಾರ್ಗ ತೋರಿದರು.

ಶ್ರಾವಕರಿಗೆ ದೇವಪೂಜೆ, ಗುರುಗಳ ಸೇವೆ, ಸ್ವಧ್ಯಾಯ, ಸಂಯಮ, ತಪ, ದಾನಗಳೆಂಬ 6 ಕ್ರಿಯೆಗಳನ್ನು ತಪ್ಪದೇ ಪಾಲಿಸುತ್ತ, ಅಹಿಂಸಾ ಪರಮೋ ಧರ್ಮ ಮಾರ್ಗದಲ್ಲಿ ನಡೆಯಲು ಮಾರ್ಗ ತೋರಿಸಿದರು. ಅವರ ಸ್ಮರಣೆಗಾಗಿಯೇ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಶ್ರದ್ಧಾ ಭಕ್ತಿ ಪೂರ್ವಕವಾಗಿ ವೃಷಭನಾಥ ತೀರ್ಥಂಕರರ ಲಘು ಪಂಚಕಲ್ಯಾಣದ ಪೂಜೆ ಮತ್ತು ತೀರ್ಥಂಕರರಿಗಾಗುವ 5 ಕಲ್ಯಾಣಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತದೆ.

ವೃಷಭನಾಥರು, ನಾಭಿರಾಜ– ಮರುದೇವಿ ಪುತ್ರರಾಗಿ ಅಯೋಧ್ಯೆಯ ಬಳಿ ಇರುವ ಸಾಕೇತ ಪಟ್ಟಣದಲ್ಲಿ ಜನಿಸಿ, ಕೈಲಾಸದಲ್ಲಿ ಮೋಕ್ಷ ಪಡೆದರು. ಗರ್ಭ ಕಲ್ಯಾಣ, ಜನ್ಮ ಕಲ್ಯಾಣ, ದೀಕ್ಷಾ ಕಲ್ಯಾಣ, ಕೇವಲಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣಗಳೆಂಬ ಒಟ್ಟು 5 ಕಲ್ಯಾಣಗಳಿದ್ದು, ಅವುಗಳ ವಿಧಿ ವಿಧಾನಗಳನ್ನು ಪಂಚಕಲ್ಯಾಣದ ಸಮಯದಲ್ಲಿ ನೆರವೇರಿಸಲಾಗುತ್ತದೆ.

ಅಲಂಕಾರಗೊಂಡಿರುವ ಶ್ರವಣಬೆಳಗೊಳದ ಭಂಡಾರ ಬಸದಿ
ಮೆಟ್ಟಿಲು ಹತ್ತಲಾಗದೇ ಭಕ್ತರು ನಿರಾಸೆಯಿಂದ ಹಿಂದಿರುಗಬಾರದು ಎಂದು ಹಿಂದಿನ ಶ್ರೀಗಳು ಮೂರ್ತಿ ಕೆತ್ತಿಸಿದ್ದರು. ಅದರ ಪ್ರಥಮ ಮಸ್ತಕಾಭಿಷೇಕ ನೆರವೇರಲಿದೆ.
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ
ವಿವಿಧ ಧಾರ್ಮಿಕ ಕಾರ್ಯಕ್ರಮ
ಫೆ.14ರಂದು ಬೆಳಗಿನ ಜಾವ 4.50ರಿಂದ ಸಕಲೀಕರಣ ಇಂದ್ರಪ್ರತಿಷ್ಠೆ ನಾಂದಿ ಮಂಗಲ ಅಖಂಡ ದೀಪ ಸ್ಥಾಪನೆ ಧ್ವಜಾರೋಹಣ ಚತುರ್ದಿಕ್ ಹೋಮ ವಾಸ್ತು ವಿಧಾನ ನವಗ್ರಹ ಹೋಮ ಯಾಗ ಮಂಡಲ ವಿಧಾನ ಸಂಜೆ ಗರ್ಭಾವತರಣ ಕಲ್ಯಾಣ ವಿಧಿಗಳು ಪ್ರಾರಂಭವಾಗುತ್ತವೆ. ರಾತ್ರಿ 8 ರಿಂದ ಹಾಸನದ ವಿದುಷಿ ಅಂಬಳೆ ರಾಜೇಶ್ವರಿ ಶಿಷ್ಯ ತಂಡದಿಂದ ಭರತ ಬಾಹುಬಲಿ ಚರಿತ್ರೆ ನೃತ್ಯ ರೂಪಕ ನಾಟಕ ಏರ್ಪಡಿಸಲಾಗಿದೆ. ಫೆ.15ರಂದು ಬೆಳಿಗ್ಗೆ 6 ಗಂಟೆಯಿಂದ ಅಭಿಷೇಕದ ನಂತರ ನಾಭಿರಾಜರ ಸಭೆಯೊಂದಿಗೆ ಜನ್ಮ ಕಲ್ಯಾಣ ಪಾಂಡುಕ ಶಿಲೆಯಲ್ಲಿ ಜನ್ಮಾಭಿಷೇಕ ಪೂಜೆ ತೊಟ್ಟಿಲು ಪೂಜೆ ನಾಮಕರಣ ಬಾಲಕ್ರೀಡೆ ನಡೆಯಲಿದೆ. ಮಧ್ಯಾಹ್ನ 2ರಿಂದ ರಾಜ್ಯಾಭಿಷೇಕ 56 ರಾಜರಿಂದ ಕಪ್ಪ ಕಾಣಿಕೆ ಲೌಕಾಂತಿಕ ದೇವರ ಆಗಮನ ವೈರಾಗ್ಯದ ನಂತರ ದೀಕ್ಷಾ ಕಲ್ಯಾಣದ ವಿಧಿಗಳು ಜರುಗಲಿವೆ. ಫೆ. 16ರಂದು ಬೆಳಿಗ್ಗೆ 6ರಿಂದ ಅಭಿಷೇಕ ಸರ್ವದೋಷ ಪ್ರಾಯಶ್ಚಿತ್ತ ವಿಧಾನ ಆಹಾರ ದಾನ ಬೆಳಿಗ್ಗೆ 10.30ರಿಂದ ಕೇವಲ ಜ್ಞಾನ ಕಲ್ಯಾಣ ಮತ್ತು ಪ್ರತಿಷ್ಠಾ ವಿಧಿ ಸಮವಸರಣ ಪೂಜೆ ಮೋಕ್ಷ ಕಲ್ಯಾಣದ ನಂತರ ಲಘು ಸಿದ್ಧ ಚಕ್ರ ವಿಧಾನದೊಂದಿಗೆ ಮಧ್ಯಾಹ್ನ 2ರಿಂದ ಬಾಹುಬಲಿ ಸ್ವಾಮಿಗೆ ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಲಿದೆ. ರಾತ್ರಿ 7.30ರಿಂದ ಬಾಹುಬಲಿ ಸ್ವಾಮಿಯ ಸುವರ್ಣ ರಥ ಯಾತ್ರೆಯ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನೆರವೇರಲಿದೆ ಎಂದು ಎಸ್‌ಡಿಜೆಎಂಐಎಂಸಿ ಟ್ರಸ್ಟ್‌ ಕಾರ್ಯದರ್ಶಿ ಎಸ್.ಬಿ.ಮಹೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.