ADVERTISEMENT

ಹಾಸನ | ಒಂದೇ ದಿನ 5 ಮಂದಿ ಸಾವು

104 ಜನರಿಗೆ ಕೊರೊನಾ ಪಾಸಿಟಿವ್‌, ಸೋಂಕಿನ ಸಂಖ್ಯೆ 1842ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:02 IST
Last Updated 28 ಜುಲೈ 2020, 14:02 IST

ಹಾಸನ: ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಏರುಗತಿಯಲ್ಲೇ ಸಾಗಿದ್ದು, ಮಂಗಳವಾರ 104 ಮಂದಿಗೆ ಕೋವಿಡ್‌ ದೃಢಪಟ್ಟು, ಐದು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರೆಗೆ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆ ಆಗಿದೆ.

ಹೃದಯ ಸಂಬಂಧಿ ಕಾಯಿಲೆ ಹಾಗೂ ಅಸ್ತಮಾದಿಂದ ಜುಲೈ 19ರಂದು ಆಸ್ಪತ್ರೆಗೆ ದಾಖಲಾಗಿದ್ದ ಹಾಸನ ತಾಲ್ಲೂಕಿನ 72 ವರ್ಷದ ವೃದ್ಧನಿಗೆ ಕೋವಿಡ್‌ ದೃಢಪಟ್ಟಿತ್ತು. ಹಾಸನ ತಾಲ್ಲೂಕಿನ 71 ವರ್ಷದ ಮಹಿಳೆಗೆ ಜ್ವರ ಹಾಗೂ ಮಧುಮೇಹ ಕಾಯಿಲೆ ಇತ್ತು. ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 84 ವರ್ಷದ ವೃದ್ಧರಿಗೆ ಸೋಂಕು ತಗುಲಿತು. ಅರಸೀಕೆರೆ ತಾಲ್ಲೂಕಿನ 47 ವರ್ಷದ ಪುರುಷ ಹಾಗೂ ಹಾಸನ ತಾಲ್ಲೂಕಿನ 38 ವರ್ಷದ ಮಹಿಳೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದರು. ಈ ಐದು ಮಂದಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಆರೋಗ್ಯದಲ್ಲಿ ಚೇತರಿಸಿಕೊಂಡ 33 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 912 ಸಕ್ರಿಯ ಪ್ರಕರಣಗಳಿವೆ. 25 ರೋಗಿಗಳು ಐಸಿಯುನಲ್ಲಿ ಇದ್ದಾರೆ. ಸೋಂಕಿತರ ಸಂಖ್ಯೆ ಸಂಖ್ಯೆ 1842 ಕ್ಕೆ ಏರಿಕೆಯಾಗಿದೆ.

ADVERTISEMENT

ಬೆಂಗಳೂರಿನಿಂದ ಮರಳಿದ್ದ ಎಂಟು ಮಂದಿ, ಮೈಸೂರಿನಿಂದ ವಾಪಸ್‌ ಆಗಿದ್ದ ಇಬ್ಬರು ಪುರುಷರು ಹಾಗೂ ಮಹಿಳೆಗೆ ಕೊರೊನಾ ಪಾಸಿಟಿವ್‌ ಬಂದಿದೆ. ಆಂದ್ರಪ್ರದೇಶ, ಕೊಡುಗಿಗೆ ಪ್ರಯಾಣ ಬೆಳೆಸಿದ್ದ ಹಾಸನದ 26 ವರ್ಷದ ಯುವಕ, 25 ವರ್ಷದ ಯುವತಿ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 42 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಉಳಿದ ಪ್ರಕರಣಗಳು ಶೀತ, ಜ್ವರ ಲಕ್ಷಣ ಹೊಂದಿವೆ.

ಜಿಲ್ಲೆಯಲ್ಲಿ ದೃಢಪಟ್ಟ 104 ಪ್ರಕರಣಗಳಲ್ಲಿ ಅರಸೀಕೆರೆ ತಾಲ್ಲೂಕಿನ 14, ಚನ್ನರಾಯಪಟ್ಟಣ 8, ಹಾಸನ 50, ಹೊಳೆನರಸೀಪುರ 10, ಆಲೂರು 5 , ಸಕಲೇಶಪುರ 2 , ಅರಕಲಗೂಡು 11, ಬೇಲೂರು ತಾಲ್ಲೂಕು ಹಾಗೂ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲೆಯ 7 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರ, ಶೀತ, ಕೆಮ್ಮು ರೋಗ ಲಕ್ಷಣ ಇರುವವರು ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸ್ಕ್‌ ಧರಿಸುವುದು, ಅಂತರ ಪಾಲನೆ ಕಡ್ಡಾಯ ಎಂದು ಸತೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.