ಹಾಸನ: ನಗರದ ಪ್ರಮುಖ ರಸ್ತೆ ಪಕ್ಕದಲ್ಲಿನ ಪಾದಚಾರಿ ಮಾರ್ಗಗಳು ದ್ವಿಚಕ್ರ ಹಾಗೂ ಇತರೆ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ನಗರದ ಎನ್ ಆರ್ ವೃತ ದಿಂದ ಸುಭಾಷ್ ವೃತ್ತದ ಕಡೆ ಸಾಗುವ ರಸ್ತೆಯ ಅಕ್ಕ ಪಕ್ಕದಲ್ಲಿ ನೂರಾರು ದ್ವಿಚಕ್ರ ವಾಹನಗಳ ನಿಲುಗಡೆ ಸಾಮಾನ್ಯವಾಗಿದೆ ಹಾಗೂ ನಗರದ ಬಹುತೇಕ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಇದೇ ಪರಿಸ್ಥಿತಿ ಇದ್ದು ಸಾರ್ವಜನಿಕರಿಗೆ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ.
ವಾಹನಗಳ ಬೇಕಾಬಿಟ್ಟಿ ನಿಲುಗಡೆ ಜೊತೆಗೆ. ಇಲ್ಲಿನ ವಾಣಿಜ್ಯ ಅಂಗಡಿಗಳ ಜಾಹೀರಾತು ಫಲಕಗಳು ಪಾದಚಾರಿಗಳ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಮುಖ ರಸ್ತೆ ಆಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ಇರುತ್ತದೆ ಮತ್ತು ಜನರ ಸುರಕ್ಷಿತೆ ಸಂಚಾರಕ್ಕೆ ಪಾದಚಾರಿ ಮಾರ್ಗದ ಅವಶ್ಯಕತೆ ಹೆಚ್ಚಿದೆ.ಸುತ್ತಮುತ್ತಲು ವಿವಿಧ ಗ್ರಾಮ,ಪಟ್ಟಣಗಳಿಂದ ಸಾರಿಗೆ, ಖಾಸಗಿ ವಾಹನಗಳು ಹಾಗೂ ಆಟೋಗಳಲ್ಲಿ ಬಂದು ಇಳಿಯುವ ಮಹಿಳೆಯರು, ವೃದ್ಧರು, ಗರ್ಭಿಣಿಯರು, ಮಕ್ಕಳು ಸುಗಮವಾಗಿ ಸಂಚರಿಸಲು ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇಲ್ಲಿ ಪೊಲೀಸ್ ಇಲಾಖೆಯಿಂದ ವಾಹನ ನಿಲುಗಡೆ ನಿಷೇಧದ ಬೋರ್ಡ್ ಗಳನ್ನು ಹಾಕಿದ್ದರು ಸಹ ಕಾನೂನು ಪಾಲನೆ ಆಗುತ್ತಿಲ್ಲ. ಸಂಚಾರ ದಟ್ಟಣೆ ಜೊತೆಗೆ ವಾಹನಗಳ ಪಾರ್ಕಿಂಗ್ ಬೇಕಾಬಿಟ್ಟಿಯಾಗಿ ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಈ ಸಮಸ್ಯೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಸಂಚಾರಿ ಪೊಲೀಸರು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿ ಸಿರುವವರ ವಿರುದ್ಧ ಕ್ರಮ ಕೈಗೊಂಡು ವಾಹನಗಳ ಬೇಕಾಬಿಟ್ಟಿ ನಿಲುಗಡೆ ನಿರಿಯಂತ್ರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಎನ್.ಆರ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಇರುವುದರಿಂದ ಗ್ರೀನ್ ಸಿಗ್ನಲ್ ಬಂದ ಕೂಡಲೇ ಹತ್ತಾರು ವಾಹನ ಸವಾರರು ಒಮ್ಮೆಲೆ ವೇಗವಾಗಿ ಬರುತ್ತಾರೆ. ಈ ವೇಳೆ ಸಾರ್ವಜನಿಕರು ರಸ್ತೆ ದಾಟಲು ತೀವ್ರ ತೊಂದರೆ ಯಾಗುತ್ತಿದ್ದು ವಾಹನಗಳ ಬೇಕಾಬಿಟ್ಟಿ ನಿಲುಗಡೆ ಯಿಂದಾಗಿ ಅವಘಡ ಸಂಭವಿಸುವ ಮುನ್ನ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಪಾದಾಚಾರಿ ಮಾರ್ಗಗಳ ಅತಿಕ್ರಮದಿಂದ ಜನರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು .ಪಾದಚಾರಿ ಆಂದೋಲನ ಅಗತ್ಯವಾಗಿದೆ.ಲತಾ ಕುಮಾರಿ ಜಿಲ್ಲಾಧಿಕಾರಿ
ಎನ್ ಆರ್ ವೃತ್ತ ಸಂಪರ್ಕಿಸೊ ನಾಲ್ಕು ಕಡೆಗಳಲ್ಲಿ ಗುಂಡಿ ಬಿದ್ದ ರಸ್ತೆ ಇರುವುದರಿಂದ ದ್ವಿಚಕ್ರವಾಹನ ಚಾಲನೆಯಂತು ದುಸ್ತರವಾಗಿದೆ. ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ.ಭರತ್ ಖಾಸಗಿ ಉದ್ಯೋಗಿ ವಿದ್ಯಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.