ADVERTISEMENT

ಫುಟ್‌ಪಾತ್‌ ಅತಿಕ್ರಮಣ ತೆರವು ಮಾಡಿ

ಸಕಲೇಶಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:17 IST
Last Updated 24 ಡಿಸೆಂಬರ್ 2025, 4:17 IST
ಮಂಗಳವಾರ ಸಕಲೇಶಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಹಳೆಯ ಬಸ್‌ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದರು.
ಮಂಗಳವಾರ ಸಕಲೇಶಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಹಳೆಯ ಬಸ್‌ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದರು.   

ಸಕಲೇಶಪುರ: ಪಟ್ಟಣದ ಹಳೆ ಬಸ್‌ ನಿಲ್ದಾಣ ಮುಂಭಾಗ ಹಾಗೂ ಅಂಚೆ ಕಚೇರಿ ಪಕ್ಕದಲ್ಲಿ ಫುಟ್‌ಪಾತ್‌ ಅಕ್ಕಪಕ್ಕ ಬೀದಿ ಬದಿಯ ವ್ಯಾಪಾರಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಪುರಸಭೆ ಮುಖ್ಯಾಧಿಕಾರಿಗೆ ಖಡಕ್ ಆದೇಶ ನೀಡಿದರು.

ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಪಟ್ಟಣದ ಹಳೆ ಬಸ್‌ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಹಳೆ ತಾಲ್ಲೂಕು ಕಚೇರಿ ಜಾಗ, ಬಿ.ಎಂ. ರಸ್ತೆ ಹಾಗೂ ಹೊಸ ಬಸ್‌ ನಿಲ್ದಾಣಕ್ಕೆ ತೆರಳಿ ಸುಮಾರು 2 ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿಯೇ ಪಟ್ಟಣದ ಸಮಸ್ಯೆಗಳನ್ನು ಪರಿಶೀಲಿಸಿದರು.

ಸಕಲೇಶಪುರ ಮಲೆನಾಡಿನ ಹೆಬ್ಬಾಗಿಲು. ಪಶ್ಚಿಮಘಟ್ಟದ ನಿಸರ್ಗದ ಮಡಿಲಿನಲ್ಲಿ ಇರುವ ಇಂತಹ ಸುಂದರವಾದ ಊರಿನ ಮುಖ್ಯ ರಸ್ತೆಯನ್ನೇ ಸರಿಯಾಗಿ ನಿರ್ವಹಣೆ ಮಾಡಿಲ್ಲ. ರಸ್ತೆ ಬದಿಯಲ್ಲಿ ಪಾದಚಾರಿಗಳು ಹೇಗೆ ನಡೆದಾಡುತ್ತಾರೆ? ರಸ್ತೆ ಬದಿಯಲ್ಲಿ ಈ ರೀತಿ ಪ್ಲಾಸ್ಟಿಕ್ ಕಟ್ಟಿಕೊಂಡು ವ್ಯಾಪಾರ ಮಾಡುವುದಕ್ಕೆ ಯಾರು ಇವರಿಗೆ ಅನುಮತಿ ಕೊಟ್ಟಿದ್ದು? ನೀವೆಲ್ಲಾ ಏನು ಮಾಡುತ್ತಿದ್ದೀರಿ? ವ್ಯಾಪಾರಿಗಳು ಇಲ್ಲಿ ಇಲ್ಲವಾದರೆ, ಬೇರೆ ಕಡೆ ಮಾಡುತ್ತಾರೆ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು, ಪಾದಚಾರಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ? ಜನ ಹೇಗೆ ನಡೆದಾಡುತ್ತಾರೆ? ಹಾಸನ ಕಡೆಯಿಂದ ಬರುವ ಬಸ್‌ಗಳು ಹಾಗೂ ಹಾಸನದ ಕಡೆಗೆ ಹೋಗುವ ಬಸ್‌ಗಳು ಹಳೆ ಬಸ್‌ ನಿಲ್ದಾಣ ಮುಂಭಾಗ ರಸ್ತೆಯಲ್ಲಿ ನಿಂತರೆ ಜನ ಎಲ್ಲಿ ನಡೆದಾಡಬೇಕು? ಪಟ್ಟಣದ ಈ ರಾಜಬೀದಿಯಲ್ಲಿ ಫುಟ್‌ಪಾತ್‌ ಅತಿಕ್ರಮಣ ಸಂಪೂರ್ಣ ತೆರವುಗೊಳಿಸಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಫುಟ್‌ಪಾತ್‌ಗಳ ಮೇಲೆ ಯಾವುದೇ ವಸ್ತು, ಫಲಕಗಳನ್ನು ಇಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನೌಕರರ ಸಂಘದಿಂದ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಸ್ಥಳ, ಕಸ ಎಸೆಯುವ ತೊಟ್ಟಿ ಆಗಿರುವುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಪಟ್ಟಣದ ಹೃದಯ ಭಾಗದಲ್ಲಿ ಇಂತಹ ಗುಂಡಿಗಳನ್ನು ನೆಲ ಮಟ್ಟದವರೆಗೆ ಮುಚ್ಚಿ, ಸ್ವಚ್ಛತೆ ಹಾಗೂ ಸುರಕ್ಷತೆ ಕಾಯ್ದುಕೊಳ್ಳಲು ಕೂಡಲೇ ಸೂಚನೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಹೇಳಿದರು.

ರಸ್ತೆಯ ಎರಡೂ ಬದಿಯ ಚರಂಡಿಯನ್ನು ಸಂಪೂರ್ಣವಾಗಿ ಸ್ಚಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ರಸ್ತೆಯ ಎರಡೂ ಬದಿಯುದ್ದಕ್ಕೂ ಗುಂಡಿ ಇದ್ದು, ಜನರು ಸುಗಮವಾಗಿ ನಡೆದಾಡಲು ಅನುಕೂಲ ಆಗುವಂತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ರೇಶ್ಮಾ ಅವರಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್‌, ಲೋಕೋಪಯೋಗಿ ಇಲಾಖೆ ಎಇಇ ಮುರುಗೇಶ್‌, ವಲಯ ಅರಣ್ಯ ಅಧಿಕಾರಿ ಎಚ್‌.ಆರ್. ಹೇಮಂತ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಕಂದಾಯ ಇನ್‌ಸ್ಪೆಕ್ಟರ್ ದಾನುಪ್ರಕಾಶ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ರೀತಿ ಪರಿಸರ ಮಾಲಿನ್ಯ ಮಾಡುವುದು ಸರಿಯೇ? ಪುರಸಭೆ ಜೊತೆ ಎಲ್ಲ ನಾಗರಿಕರು ಸ್ವಚ್ಛತೆಗೆ ಕೈಜೋಡಿಸಬೇಕು.

-ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ

ಹೊಸ ಬಸ್ ನಿಲ್ದಾಣಕ್ಕೂ ಭೇಟಿ

ಹೊಸ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಶೌಚಾಲಯದ ಒಳಗೂ ತೆರಳಿ ಜಿಲ್ಲಾಧಿಕಾರಿ ಲತಾಕುಮಾರಿ ಸ್ವಚ್ಛತೆ ಪರಿಶೀಲಿಸಿದರು. ಸ್ವಚ್ಛತೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಚರಂಡಿಗಳ ಮೇಲೆ ಹಾಸುಗಲ್ಲುಗಳನ್ನು ಹಾಕಿಲ್ಲ. ನೀರಿನ ಸಮಸ್ಯೆ ಪಾರ್ಕಿಂಗ್ ಸಮಸ್ಯೆ ಎಷ್ಟೊಂದು ಸಮಸ್ಯೆಗಳು ಇಲ್ಲಿಯ ನಿಲ್ದಾಣದಲ್ಲಿದ್ದರೂ ಏಕೆ ಸರಿಪಡಿಸಿಲ್ಲ. ಕೂಡಲೇ ನಿಲ್ದಾಣಕ್ಕೆ ಭೇಟಿ ನೀಡಿ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸಬೇಕು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು. ಬಸ್‌ ನಿಲ್ದಾಣದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. 24X7 ಪೊಲೀಸ್‌ ನಿಯೋಜನೆ ಮಾಡಬೇಕು ಎಂದು ನಿವಾಸಿಗಳು ಕೇಳಿಕೊಂಡರು. ಪೊಲೀಸ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ವನರಾಜು ಅವರಿಗೆ ಸೂಚನೆ ನೀಡಿದರು. ಹೊಸ ಬಸ್‌ ನಿಲ್ದಾಣದ ಶೌಚಾಲಯ ಹಾಗೂ ಬೇರೆ ಕಡೆಯಿಂದ ತ್ಯಾಜ್ಯದ ನೀರು ದೊಡ್ಡಕೆರೆಗೆ ಹರಿಯುವುದರಿಂದ ಕೆರೆಯ ಸುತ್ತಲೂ ವಾಕಿಂಗ್ ಮಾಡುವುದಕ್ಕೆ ಸಾಧ್ಯವಾಗದಷ್ಟು ವಾಸನೆ ಇದೆ ಎಂದು ಸಾರ್ವಜನಿಕರು ದೂರಿದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.