ADVERTISEMENT

ಮಳೆಯ ಅಬ್ಬರಕ್ಕೆ ನಾಲ್ಕು ಮನೆಗೆ ಹಾನಿ

ನಿತ್ಯದ ಕೆಲಸ ಕಾರ್ಯಕ್ಕೆ ತೊಂದರೆ, ಹಲವು ರಸ್ತೆಗಳು ಕೆಸರುಮಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 12:30 IST
Last Updated 21 ಸೆಪ್ಟೆಂಬರ್ 2020, 12:30 IST
ಹಾಸನ ನಗರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ರಸ್ತೆ ಕೆಸರುಮಯವಾಗಿದೆ.
ಹಾಸನ ನಗರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ರಸ್ತೆ ಕೆಸರುಮಯವಾಗಿದೆ.   

ಹಾಸನ: ಜಿಲ್ಲೆಯಲ್ಲಿ ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು ಭಾಗದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಅರೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಸಕಲೇಶಪುರ, ಹೆತ್ತೂರು, ಆಲೂರು ಭಾಗದಲ್ಲಿ ಜೋರು ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿ ಬಿದ್ದಿವೆ.

ಜಲಾನಯನ ಪ್ರದೇಶಗಳಾದ ಸಕಲೇಶಪುರ ಮತ್ತು ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ12 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 15 ಸಾವಿರ ಕ್ಯುಸೆಕ್‌ ಹೊರ ಬಿಡಲಾಗುತ್ತಿದೆ.

ADVERTISEMENT

ಹಾಸನ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುರಿದ ಜೋರು ಮಳೆಯಿಂದ ಜನರು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಯಿತು. ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದರು. ಕೆಎಸ್‌ಆರ್‌ಟಿ ಬಸ್‌ ನಿಲ್ದಾಣ ರಸ್ತೆ ಕೆಸರುಮಯವಾಗಿತ್ತು. ಹಲವರು ಮಳೆಯಲ್ಲಿಯೇ ತೊಯ್ದುಕೊಂಡು ಓಡಾಡಿದರು.

ಸಕಲೇಶಪುರ, ಹೆತ್ತೂರು ಭಾಗದಲ್ಲಿ ಜನರು ಮನೆಯಿಂದ ಹೊರಬರಲು ಆಗದಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅರಕಲಗೂಡು, ಹೊಳೆನರಸೀಪುರ, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ತಂಪಾದ ಗಾಳಿ ಬೀಸುತ್ತಿದೆ.

ತುಂತುರು ಮಳೆಯಿಂದಾಗಿ ಜನರ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಯಿತು. ಶೀತ ಹಾಗೂ ಗಾಳಿಯಿಂದ ಕೂಡಿದ ಸೊನೆ ಮಳೆ ಆಗುತ್ತಿರುವುದರಿಂದ ಕಾಫಿ, ಮೆಣಸಿನ ಬಳ್ಳಿಗಳಿಗೆ ಹಾನಿಯಾಗುತ್ತಿದೆ.

ಅರಕಲಗೂಡು, ಕೊಣನೂರು ಭಾಗದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಎದುರಾಗಿದೆ. ಕಟ್ಟೇಪುರ, ಮಾದಾಪುರ, ಗೊಬ್ಬಳಿ, ಬಾನುಗೊಂದಿ, ಹೊಸಳ್ಳಿ, ರಾಮನಾಥಪುರ, ಕೇರಳಾಪುರ, ಬೆಟ್ಟಸೋಗೆ, ಬಸವಾಪಟ್ಟಣ ಭಾಗದಲ್ಲಿ ಭತ್ತದ ಪೈರು ನೀರಿನಲ್ಲಿ ಮುಳಗಿದೆ.

ಹಾರಂಗಿ ಜಲಾಶಯದಲ್ಲಿ ನೀರು ಹೊರ ಬಿಡಲಾಗಿದ್ದು, ನದಿ ಉಕ್ಕಿ ಹರಿಯುತ್ತಿರುವ ಪರಿಣಾವಾಗಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ನಷ್ಟವಾಗುವ ಆತಂಕ ಎದುರಾಗಿದೆ. ಆಗಸ್ಟ್‌ನಲ್ಲಿ ಭತ್ತದ ನಾಟಿ ಸಮಯದಲ್ಲಿ ಸಸಿ ಮಡಿ ನೀರಿನಲ್ಲಿ ಮುಳುಗಿ ರೈತರು ಸಂಕಷ್ಟ ಅನುಭವಿಸಿದ್ದರು.

‘ಮೂರು ದಿನಗಳ ಹಿಂದೆಯೇ ವ್ಯಾಪಕ ಮಳೆಯಾಗುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹೇಮಾವತಿ ಜಲಾಶಯಕ್ಕೂ ಹೆಚ್ಚು ನೀರು ಹರಿದು ಬರುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಎರಡು ದಿನಗಳಿಂದ ಸುರಿದ ಮಳೆಯಿಂದ ನಾಲ್ಕು ಮನೆಗಳಿಗೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.