ADVERTISEMENT

ಶಿಕ್ಷಕಿ ಹೆಸರಿನಲ್ಲಿ ಕರೆ ಮಾಡಿ ವಂಚನೆ

ಆರೋಪಿ ಬಂಧನ, ಅಪಘಾತದಲ್ಲಿ ಮಡಿದ ಯುವಕನ ಮೊಬೈಲ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:14 IST
Last Updated 7 ನವೆಂಬರ್ 2019, 10:14 IST

ಸಕಲೇಶಪುರ: ಶಿಕ್ಷಕಿಯೊಬ್ಬರ ಹೆಸರಿನಲ್ಲಿ ಕೆಲವರಿಗೆ ಕರೆ ಮಾಡಿ ಹಣ ವಸೂಲಿ ಮಾಡಿದ್ದ ಪ್ರಕರಣವೊಂದನ್ನು ಇಲ್ಲಿಯ ಗ್ರಾಮಾಂತರ ಠಾಣೆ ಪಿಎಸ್‌ಐ ಬಿ.ಟಿ. ಬ್ಯಾಟರಾಯಗೌಡ ಭೇದಿಸಿದ್ದಾರೆ.

ಹಾದಿಗೆ ಗ್ರಾಮದ ಪೃಥ್ವಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಆತನನ್ನು ಬಂಧಿಸಲಾಗಿದೆ. ಈತನ ಪತ್ನಿ ಹಾಗೂ ಮತ್ತೊಬ್ಬ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಹಾನುಬಾಳು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯೊಬ್ಬರ ಹೆಸರಿನಲ್ಲಿ ಸೆಪ್ಟಂಬರ್‌ನಲ್ಲಿ ಹುರುಡಿ ಗ್ರಾಮದ ಕೇಶವಮೂರ್ತಿ ಹಾಗೂ ಮತ್ತಿಬ್ಬರಿಗೆ ಪದೇ ಪದೇ ಕರೆ ಮಾಡಿ "ತನಗೆ ಹಣದ ಅವಶ್ಯಕತೆ ಇದ್ದು, ಸಹಾಯ ಮಾಡಿ. ಈ ವಿಷಯ ತನ್ನ ಪತಿಗೆ ತಿಳಿಯದಂತೆ ಗೋಪ್ಯವಾಗಿ ಇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇಶವಮೂರ್ತಿ ₹40 ಸಾವಿರ ಹಾಗೂ ಮತ್ತಿಬ್ಬರು ತಲಾ ₹20 ಸಾವಿರ ಹಣ ನೀಡಿದ್ದಾರೆ.

ADVERTISEMENT

ಹಣವನ್ನು ಖುದ್ದಾಗಿ ನೀವೇ ಬಂದು ಕೊಡಬೇಡಿ, ಯಾರ ಮೂಲಕವಾದರೂ ಹಾನುಬಾಳು ವೃತ್ತದಲ್ಲಿರುವ ಎಸ್‌ಟಿಡಿ ಬೂತ್‌ನಲ್ಲಿರುವ ಸಿಬ್ಬಂದಿ ಕೈಗೆ ಕೊಡಿ ಎಂದು ಹೇಳಿದ್ದರಿಂದ. ಇಬ್ಬರು ತಲಾ ₹20 ಸಾವಿರವನ್ನು ಎಸ್‌ಟಿಡಿ ಬೂತ್‌ ಸಿಬ್ಬಂದಿಗೆ ತಲುಪಿಸಿದ್ದಾರೆ. ಮತ್ತೊ ಬ್ಬರಿಗೆ ವೃದ್ಧ ಕುಳಿತುಕೊಳ್ಳುವ ಅಂಗಡಿ ಯೊಂದಕ್ಕೆ ನೀಡುವಂತೆ ತಿಳಿಸಿದ್ದಾರೆ. ಅಲ್ಲಿಗೆ ವ್ಯಕ್ತಿಯೊಬ್ಬ ಬಂದು ಹಣ ಸ್ವೀಕರಿಸಿದ್ದಾನೆ.

ಬಳಿಕ ಕೇಶವಮೂರ್ತಿ ಶಿಕ್ಷಕಿಗೆ ಪದೇ ಪದೇ ಕರೆ ಮಾಡಿ ಹಣ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ನಾನು ನಿಮಗೆ ಕರೆಯನ್ನೂ ಮಾಡಿಲ್ಲ, ನಿಮ್ಮಿಂದ ಹಣವನ್ನೂ ಪಡೆದುಕೊಂಡಿಲ್ಲ. ಸುಮ್ಮನೆ ಸುಳ್ಳು ಹೇಳಿ ಹಿಂಸೆ ಕೊಡಬೇಡಿ’ ಎಂದು ಶಿಕ್ಷಕಿ ಹೇಳಿದ್ದಾರೆ. ಅಲ್ಲದೇ, ಈ ವಿಷಯನ್ನು ಪತಿಗೆ ತಿಳಿಸಿದ್ದಾರೆ. ಬಳಿಕ ಆಕೆಯ ಪತಿ ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಕರೆ ಮಾಡಿ ₹40 ಸಾವಿರ ವಂಚಿಸಲಾಗಿದೆ ಎಂದು ಕೇಶವಮೂರ್ತಿ ಸಹ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಪೊಲೀಸ್‌ ಠಾಣೆಗೆ ದೂರು ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಪೃಥ್ವಿ ಸಿಮ್‌ ಅನ್ನು ಕೆರೆಗೆ ಎಸೆದಿದ್ದಾನೆ.

ಪ್ರಕರಣದ ಬೆನ್ನತ್ತಿದ ಪೊಲೀಸರು ಮೊಬೈಲ್‌ ಸಂಖ್ಯೆಯ ಜಾಡನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೃಥ್ವಿಯ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ, ‘ಏಪ್ರಿಲ್‌ ತಿಂಗಳಲ್ಲಿ ಹೆತ್ತೂರಿನ ಸಮೀಪದ ಹಳ್ಳಿಬೈಲು ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದ. ಆತನನ್ನು ಪೃಥ್ವಿ ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದ. ಆದರೆ, ಯುವಕ ಮೃತಪಟ್ಟಿದ್ದರಿಂದ ಆತನ ಮೊಬೈಲ್‌ ತನ್ನ ಬಳಿಯೇ ಇಟ್ಟುಕೊಂಡಿದ್ದ. ಅದೇ ನಂಬರ್‌ನಿಂದ ಪತ್ನಿಯಿಂದ ಶಿಕ್ಷಕಿ ಹೆಸರಿನಲ್ಲಿ ಕರೆ ಮಾಡಿಸುತ್ತಿದ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ‘ ಎಂದು ಪೊಲೀಸರು ತಿಳಿಸಿದ್ದಾರೆ.

’ಯಾರೋ ಮಾಡಿದ ತಪ್ಪಿಗೆ ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ನೊಂದು ಹೋಗಿದ್ದೆವು. ವಂಚನೆಗೊಳಗಾದವರು ಆರೋಪಿ ಮಾಡಿದ್ದ ಕರೆಯನ್ನು ರೆಕಾರ್ಡ್ ಮಾಡಿ ಹರಿಬಿಟ್ಟಿದ್ದರು. ಇದರಿಂದ ಊರಿನವರೆಲ್ಲಾ ತನ್ನ ಪತ್ನಿ ಬಗ್ಗೆ ತಪ್ಪು ತಿಳಿದುಕೊಂಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ಈ ಪ್ರಕರಣದ ಸತ್ಯಾಂಶವನ್ನು ಪತ್ತೆ ಹಚ್ಚುವ ಮೂಲಕ ತನ್ನ ಪತ್ನಿಯನ್ನು ಆರೋಪ ಮುಕ್ತಗೊಳಿಸಿದ್ದಾರೆ‘ ಎಂದು ಶಿಕ್ಷಕಿಯ ಪತಿ ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.