ADVERTISEMENT

ಗಮನ ಸೆಳೆದ ಯೋಗ ನಡಿಗೆ

ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದ ಯೋಗಪಟುಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:14 IST
Last Updated 17 ಜೂನ್ 2019, 14:14 IST
ಹಾಸನದಲ್ಲಿ ಆಯೋಜಿಸಿದ್ದ ಯೋಗ ನಡಿಗೆಯಲ್ಲಿ ಸಂಘ ಸಂಸ್ಥೆ ಪದಾಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಾಸನದಲ್ಲಿ ಆಯೋಜಿಸಿದ್ದ ಯೋಗ ನಡಿಗೆಯಲ್ಲಿ ಸಂಘ ಸಂಸ್ಥೆ ಪದಾಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.   

ಹಾಸನ: ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗ ನಡಿಗೆಗೆ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಯಿತು.
‌‌
ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಎಸ್ ಡಿಎಂ ಆಯುರ್ವೇದ ಕಾಲೇಜು, ಕೆಎಂಎಫ್, ನೆಹರು ಯುವ ಕೇಂದ್ರ, ಪತಂಜಲಿ ಯೋಗ ಸಮಿತಿ, ಯೋಗ ಸಂಘಗಳು ಹಾಗೂ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಯೋಗ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ಎನ್.ವಿಜಯ್ ಪ್ರಕಾಶ್ ಚಾಲನೆ ನೀಡಿದರು.

ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಯೋಗ ಪಟುಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಆಯುಷ್‌ ಇಲಾಖೆ ಸಿಬ್ಬಂದಿ, ಯೋಗ ಶಾಲೆ ವಿದ್ಯಾರ್ಥಿಗಳು ಶ್ವೇತವಸ್ತ್ರ ಧರಿಸಿ ಗಮನ ಸಳೆದರು.

ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಯೋಗ ನಡಿಗೆಯಲ್ಲಿ ಯೋಗಪಟುಗಳು ‘ಹೃದಯಕ್ಕಾಗಿ ಯೋಗ’ ಎಂಬ ಘೋಷ ವಾಕ್ಯಗಳ ಫಲಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ADVERTISEMENT

ಎನ್.ಆರ್. ವೃತ್ತದ ಮೂಲಕ ಸಾಗಿ ಹೇಮಾವತಿ ಪ್ರತಿಮೆ, ಮಹಾರಾಜ ಪಾರ್ಕ್ ಸುತ್ತುವರೆದು ಕಲಾ ಭವನ ತಲುಪಿತು. ನಡಿಗೆಯಲ್ಲಿ ಪಾಲ್ಗೊಂಡವರಿಗೆ ಲಘು ಉಪಹಾರ, ಮಜ್ಜಿಗೆ ನೀಡಲಾಯಿತು.

ಪತಂಜಲಿ ಯೋಗ ಸಂಸ್ಥೆ ಮುಖ್ಯಸ್ಥ ಹರಿಹರ ಶ್ರೀಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರಂಭಿಸಿದ ಯೋಗವನ್ನು ಇಡೀ ವಿಶ್ವದಲ್ಲಿಯೇ ಹಬ್ಬದ ದಿನವಾಗಿ ಆಚರಿಸಲಾಗುತ್ತಿದೆ. ಜೂನ್‌ 21 ರ ಯೋಗ ದಿನದ ಅಂಗವಾಗಿ ನಗರದಲ್ಲಿ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅಂದು ಕ್ರೀಡಾಂಗಣದಲ್ಲಿ ಬೆಳಗ್ಗೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಯೋಗ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಆಯುಷ್ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಪುಷ್ಪಾ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಎಂ.ಸರಶೆಟ್ಟಿ, ಶೇಷಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.