ಹಾಸನ: ಅಹಿಂಸಾ ಮಾರ್ಗ ತೋರಿಸಿದವರು ಮಹಾತ್ಮ ಗಾಂಧೀಜಿ. ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು ಎಂಬುದು ಅವರ ತತ್ವ, ಸಿದ್ದಾಂತವಾಗಿದೆ. ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳೋಣ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು. ಅವರ ನಡೆ-ನುಡಿ, ತತ್ವ-ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.
ದೇಶ ಕಂಡ ಅಪ್ರತಿಮ ನಾಯಕ ಶಾಸ್ತ್ರಿಯವರು ಸರಳ ಸಜ್ಜನಿಕೆ ಹಾಗೂ ಭ್ರಷ್ಟಚಾರ ಮುಕ್ತ ಆಡಳಿತ ನೀಡಿದವರು. ಬಡತನದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು, ಬಡತನದಲ್ಲೇ ಅಸುನೀಗಿದರು. ತಾವು ಪ್ರಧಾನಿಯಾಗಿದ್ದ ಕಡಿಮೆ ಅವಧಿಯಲ್ಲೇ ಪ್ರಾಮಾಣಿಕ ಆಡಳಿತ ನೀಡಿದರು ಎಂದು ತಿಳಿಸಿದರು.
‘ಲಾಲ್ ಬಹದ್ದೂರ್ ಶಾಸ್ತ್ರೀಜಿ ಕೊಟ್ಟಿರುವ ಜೈ ಜವಾನ್, ಜೈ ಕಿಸಾನ್ ಸಂದೇಶ, ರೈತರ ಸಬಲೀಕರಣ, ಮಹಿಳಾ ಸಬಲೀಕರಣ, ವಿವಿಧ ಖಾತೆಗಳ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿರುವುದು ಮಾದರಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ‘ಎಲ್ಲ ಧರ್ಮದ ಮೂಲ ಒಂದೇ. ಅಹಿಂಸೆ, ಸತ್ಯವನ್ನು ಎತ್ತಿ ಹಿಡಿಯುವಂಥದ್ದು. ಗಾಂಧೀಜಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಸ್ವಚ್ಛತೆಯೇ ಸತ್ಯ, ಸ್ವಚ್ಛತೆಯೇ ಸುಂದರ. ನಮ್ಮ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು’ ಎಂದರು.
ಪ್ರತಿಯೊಂದು ಅಂಗಡಿ ಮುಂದೆ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳಬೇಕು. ಸ್ವಇಚ್ಛೆಯಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದು ನಾಗರಿಕರ ಜವಾಬ್ದಾರಿ ಎಂದು ತಿಳಿಸಿದರು.
ಸರ್ವಧರ್ಮ ಪ್ರಾರ್ಥನೆ ನೆರವೇರಿತು. ಹಿಂದೂ ಧರ್ಮ ಕುರಿತು ಸತ್ಯನಾರಾಯಣ, ಮುಸ್ಲಿಂ ಧರ್ಮ ಕುರಿತು ಎಸ್.ಎಸ್. ಪಾಷ, ಕ್ರಿಶ್ಚಿಯನ್ ಧರ್ಮ ಕುರಿತು ವಿನಿಶ್ ಸ್ವರೂಪ್, ಬೌದ್ದ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಮೃತ್ಯುಂಜಯ ಪ್ರವಚನ ನೀಡಿದರು.
ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕುರಿತು ಕಿರು ನಾಟಕ ಪ್ರಸ್ತುತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿ ಮಾರುತಿ ಮತ್ತಿತರರು ಉಪಸ್ಥಿತರಿದ್ದರು. ಯದೀಶ್ ನಿರೂಪಿಸಿದರು. ಮುರುಳಿ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಸ್ವಾಗತಿಸಿದರು.
ಪುಟಾಣಿ ಮಕ್ಕಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ವೇಷ ಧರಿಸಿ ಗಮನ ಸೆಳೆದರು. ವೇಷಧಾರಿ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರೌಢಶಾಲೆ ಪದವಿಪೂರ್ವ ಹಾಗೂ ಪದವಿ ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹ 3ಸಾವಿರ ದ್ವಿತೀಯ ₹2ಸಾವಿರ ತೃತೀಯ ₹ 1 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ಉದಯಪುರದ ಕೆ.ಪಿ.ಎಸ್ ಶಾಲೆಯ ನಿತ್ಯ ಪ್ರಥಮ ಆಲೂರು ತಾಲ್ಲೂಕು ಕಣತ್ತೂರಿನ ಕಿರಣ್ ಆಂಗ್ಲ ಮಾಧ್ಯಮ ಶಾಲೆಯ ಗ್ರೀಷ್ಮಾ ದ್ವಿತೀಯ ಬೇಲೂರು ತಾಲ್ಲೂಕಿನ ಸರ್ವೋದಯ ಪ್ರೌಢಶಾಲೆಯ ಆದಿತ್ಯ ಗೌಡ ವಿ. ತೃತೀಯ ಬಹುಮಾನ ಪಡೆದರು. ಪದವಿಪೂರ್ವ ವಿಭಾಗದಲ್ಲಿ ಹಾಸನದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುಮಾರಿ ಜಿ.ಜೆ. ಪ್ರಥಮ ಹಾಸನದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಹಾಸ್ ಐ.ಆರ್. ದ್ವಿತೀಯ ಹಾಸನದ ಮಾಸ್ಟರ್ಸ್ ಪಿ.ಯು. ಕಾಲೇಜಿನ ಲಿಪಿಕ ಎಚ್.ಸಿ. ತೃತೀಯ ಬಹುಮಾನ ಪಡೆದರು. ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹೊಳೆನರಸೀಪುರ ತಾಲ್ಲೂಕು ಪಡವಲಹಿಪ್ಪೆಯ ಎಚ್.ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮೀತಾ ಎಸ್.ಆರ್. ಪ್ರಥಮ ಚನ್ನರಾಯಪಟ್ಟಣ ತಾಲ್ಲೂಕಿನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಭವ್ಯಶ್ರೀ ದ್ವಿತೀಯ ಹಾಸನದ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಕೆ.ಆರ್. ಸೌಮ್ಯ ತೃತೀಯ ಬಹುಮಾನ ಪಡೆದರು.
‘ಸ್ವಚ್ಛತೆಗೆ ಆದ್ಯತೆ ನೀಡಿ’
ಸಾರ್ವಜನಿಕರು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ರೀತಿಯಲ್ಲಿಯೇ ನಗರ ಪಟ್ಟಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕೈಜೋಡಿಸುವ ಮೂಲಕ ಆದ್ಯತೆ ನೀಡಬೇಕು. ಸ್ವಚ್ಛತೆ ಕಾಪಾಡುವುದು ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಜವಾಬ್ದಾರಿ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಅಂಗವಾಗಿ ಗುರುವಾರ ಬೆಳಿಗ್ಗೆ ಡೈರಿ ವೃತ್ತದಿಂದ ಏರ್ಪಡಿಸಲಾಗಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ ‘ಕೆರೆ ಹಾಗೂ ರಸ್ತೆಗಳ ಅಕ್ಕಪಕ್ಕದಲ್ಲಿ ಕಸ ಹಾಕಬಾರದು. ಅವು ನಮ್ಮ ಆಸ್ತಿ. ನಾಗರಿಕರು ಜವಾಬ್ದಾರಿಯಿಂದ ಸ್ವಚ್ಛತೆ ಕಾಪಾಡಬೇಕು’ ಎಂದರು. ಮೇಯರ್ ಗಿರೀಶ್ ಚನ್ನವೀರಪ್ಪ ಉಪ ಮೇಯರ್ ಹೇಮಲತಾ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಪಾಲಿಕೆಯ ಆಯುಕ್ತ ಕೃಷ್ಣಮೂರ್ತಿ ಕಾರ್ಯಪಾಲಕ ಎಂಜಿನಿಯರ್ ಚನ್ನೇಗೌಡ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.