ಸಕಲೇಶಪುರ: ಪಟ್ಟಣದಲ್ಲಿ ಸಕಲೇಶ್ವರಸ್ವಾಮಿ ದಿವ್ಯ ರಥಾರೋಹಣ ಹಾಗೂ ಬ್ರಹ್ಮ ರಥೋತ್ಸವವನ್ನು ಫೆ.1 ಮತ್ತು ಫೆ.2ರಂದು ಅದ್ದೂರಿಯಾಗಿ ನಡೆಸಲಾಗುತ್ತಿದೆ ಎಂದು ಸಕಲೇಶ್ವರಸ್ವಾಮಿ ದೇವಸ್ಥಾನದ ಮಾಜಿ ಸಂಚಾಲಕ ನಂದಿಕೃಪ ರಾಜು ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಥೋತ್ಸವ ಅಂಗವಾಗಿ ಸ್ವಸ್ತಿವಾಚನ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಸಂಜೆ ಧ್ವಜಾರೋಹಣ, ಅಂಕುರಾರ್ಪಣ ಮತ್ತು ಕಳಶ ಪ್ರತಿಷ್ಠಾಪನೆ ನಡೆಯಲಿದೆ’ ಎಂದರು.
‘ಸಕಲೇಶ್ವರಸ್ವಾಮಿ ರಥೋತ್ಸವ ಹಾಗೂ ಜಾತ್ರೆ ಅಂಗವಾಗಿ ಈ ವರ್ಷದಿಂದ ಜಿಲ್ಲೆಯ ಜೀವನದಿ ಹೇಮಾವತಿ ನದಿಯಲ್ಲಿ ವಿಶೇಷವಾಗಿ ಧಾರ್ಮಿಕ ವಿಧಿ ವಿಧಾನಗಳಿಂದ ‘ಗಂಗಾರತಿ’ ನಡೆಸಲಾಗುತ್ತಿದೆ. ಆದಿ ಚುಂಚನಗಿರಿ ಶಾಖ ಮಠದ ಅಧ್ಯಕ್ಷ ಶಂಭುನಾಥ ಸ್ವಾಮಿ ಹಾಗೂ ತೆಂಕಲಗೂಡು ಮಠದ ಪೀಠದ ಚನ್ನಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಗಂಗಾರತಿ ನಡೆಯಲಿದೆ’ ಎಂದು ನಂದಿಕೃಪ ರಾಜು ಹೇಳಿದರು.
ದೇವಸ್ಥಾನ ಸಮಿತಿಯ ರವಿಕುಮಾರ್ ಮಾತನಾಡಿ, ‘ಪ್ರತಿ ವರ್ಷ ಜಾತ್ರಾ ವಸ್ತು ಪ್ರದರ್ಶನವನ್ನು ಹರಾಜು ಮೂಲಕ ಖಾಸಗಿಯವರಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಶಾಸಕ ಸಿಮೆಂಟ್ ಮಂಜು ಹಾಗೂ ಊರಿನ ಹಿರಿಯ ಸಲಹೆಯಂತೆ ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿಯಿಂದಲೇ ಜಾತ್ರಾ ವಸ್ತುಪ್ರದರ್ಶನ ನಡೆಸಲಾಗುವುದು. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬುದೇ ಉದ್ದೇಶ’ ಎಂದರು.
ಸ್ಥಳೀಯ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಬಡ್ಡಿ, ಶಟಲ್‌ಕಾಕ್, ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ ಎಂದರು.
ಸಮಿತಿಯ ಕಾರ್ಯದರ್ಶಿ ಎಸ್.ಎನ್. ಅವಿನಾಶ್, ಭಕ್ತ ಮಂಡಳಿಯ ಅಧ್ಯಕ್ಷ ಬ್ಯಾಕರವಳ್ಳಿ ಜಯರಾಜ್, ಉಪಾಧ್ಯಕ್ಷ ಎಚ್.ಟಿ. ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.