ADVERTISEMENT

ಮಳಲಿ ಕಸ ವಿಲೇವಾರಿ ಘಟಕ ಸ್ಥಳಾಂತರಿಸಿ

ಎ.ಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ: ದೊಡ್ಡಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 13:43 IST
Last Updated 12 ಜುಲೈ 2021, 13:43 IST
ಸಕಲೇಶಪುರ ತಾಲ್ಲೂಕು ಮಳಲಿ ಗ್ರಾಮದ ಸರ್ವೆ ನಂ. 14ರಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಮುಖಂಡರು ಜಿಲ್ಲಾಧಿಕಾರಿ ಆರ್‌‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.
ಸಕಲೇಶಪುರ ತಾಲ್ಲೂಕು ಮಳಲಿ ಗ್ರಾಮದ ಸರ್ವೆ ನಂ. 14ರಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಮುಖಂಡರು ಜಿಲ್ಲಾಧಿಕಾರಿ ಆರ್‌‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.   

ಹಾಸನ: ಸಕಲೇಶಪುರ ತಾಲ್ಲೂಕು ಮಳಲಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸದಿದ್ದರೆ ಸಕಲೇಶಪುರ ಉಪವಿಭಾಗಾಧಿಕಾರಿಕಚೇರಿ ಎದುರು ಗ್ರಾಮಸ್ಥರೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದುಮುಖಂಡ ದೊಡ್ಡಯ್ಯ ಎಚ್ಚರಿಕೆ ನೀಡಿದರು.

ಮಳಲಿ ಗ್ರಾಮದ ಸರ್ವೆ ನಂ.14ರಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ವಿಷಯಕ್ಕೆಸಂಬಂಧಿಸಿದಂತೆ 15 ವರ್ಷಗಳಿಂದ ಗ್ರಾಮಸ್ಥರು ಹಾಗೂ ಪುರಸಭೆ ಅಧಿಕಾರಿಗಳನಡುವೆ ಸಂಘರ್ಷ ನಡೆಯುತ್ತಲೇ ಇದೆ. ಆರಂಭದಿಂದಲೂ ಗ್ರಾಮಕ್ಕೆ ಕಸ ವಿಲೇವಾರಿ ಘಟಕ ಬೇಡ ಎಂದು ವಿರೋಧಿಸಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದುಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಳಲಿ ಗ್ರಾಮದಲ್ಲಿ 100 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಈ ಮನೆಗಳು ಘಟಕ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಿಂದ 500 ಮೀಟರ್‌ ಒಳಗೆ ಇವೆ ಎಂದು ಹೇಳಿದರು.

ADVERTISEMENT

ವಿವಾದಿತ ಜಾಗದಲ್ಲಿ ಗ್ರಾಮಸ್ಥರು ಕುಡಿಯಲು ಬಳಸುವ ಕೊಳವೆ ಬಾವಿ, ಸರ್ಕಾರಿ ಶಾಲೆ,ಅಂಗನವಾಡಿ, ಸರ್ಕಾರಿ ಕೆರೆ ಮತ್ತು ಗ್ರಾಮಸ್ಥರ ನಿವೇಶನಕ್ಕೆ ಕಾಯ್ದಿರಿಸಿದ ಎರಡು ಎಕರೆಯೂಸಮೀಪದಲ್ಲಿಯೇ ಇದೆ. ಆದರೂ ಅಂದಿನ ಅಧಿಕಾರಿಗಳು ಕಸ ವಿಲೇವಾರಿ ಘಟಕದ ಸುತ್ತ ಮುತ್ತಯಾವುದೇ ಮನೆ, ಶಾಲೆ, ಕೊಳವೆ ಬಾವಿ, ಕೆರೆ ಇಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಮೂರು ಎಕರೆ ಜಾಗವನ್ನು ಘಟಕಕ್ಕೆ ಮಂಜೂರು ಮಾಡಿದ್ದರು ಎಂದು ಆರೋಪಿಸಿದರು.

ಸಕಲೇಶಪುರದಲ್ಲಿ ಒತ್ತುವರಿಯಾಗಿರುವ ಸಾವಿರಾರು ಎಕರೆ ಜಾಗ ತೆರವು ಮಾಡಿ ಹತ್ತು ಎಕರೆಯಲ್ಲಿ ಘಟಕ ಸ್ಥಾಪಿಸಬಹುದು. ಆದರೆ, ಪರಿಶಿಷ್ಟ ಜಾತಿಯ ಕುಟುಂಬಗಳು ವಾಸವಿರುವ ಮಳಲಿ ಗ್ರಾಮದಲ್ಲಿಯೇ ಘಟಕ ಸ್ಥಾಪಿಸಲು ಶಾಸಕರು ಹಠಕ್ಕೆ ಬಿದ್ದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಘಟಕ ಸ್ಥಾಪಿಸುವ ಸ್ಥಳದಲ್ಲಿ ಯಾರು ವಾಸವಿಲ್ಲ’ ಎಂದು ಪುರಸಭೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ವರದಿ ನೀಡಿದ್ದಾರೆ. ಪುರಸಭೆ ಅಧಿಕಾರಿಗಳು ನ್ಯಾಯಾಲಯಕ್ಕೂ ಸುಳ್ಳು ದಾಖಲೆ ಸಲ್ಲಿಸಿದರು. ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಲು ಮುಂದಾದಾಗ, ಶಾಸಕ ಕುಮಾರಸ್ವಾಮಿ ಅವರು, ಸರ್ಕಾರದ ಮಟ್ಟದಲ್ಲಿ ಬಗೆಹರಿಸುವುದಾಗಿ ಸುಳ್ಳು ಭರವಸೆ ನೀಡಿದ್ದರು’ ಎಂದು ದೂರಿದರು.

ಜಿಲ್ಲಾಧಿಕಾರಿ ಕೂಡಲೇ ಮಳಲಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಗುರುವಾರ ತಾಲ್ಲೂಕಿನ ಎಸ್ಸಿ, ಎಸ್ಟಿ ಮುಖಂಡರ ಸಭೆ ಕರೆದಿದ್ದು, ಮುಂದಿನ ಹೋರಾಟ ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಎಸ್ಸಿ, ಎಸ್ಟಿ ಮುಖಂಡರಾದ ವಳಲಹಳ್ಳಿ ವೀರೇಶ್‌, ನಲ್ಲುಲ್ಲಿ ಈರಪ್ಪ,ಬೆಳಗೋಡು ಬಸವರಾಜು, ಸ್ವೀವನ್‌ ಪ್ರಕಾಶ್‌ ಹಾಗೂ ವೇಣುರಾವಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.