ADVERTISEMENT

ಅಂಗವಿಕಲರಿಗೆ ಆದ್ಯತೆ ನೀಡಿ: ಪ್ರೀತಂ ಗೌಡ

ವಿಶ್ವ ಅಂಗವಿಕಲರ ದಿನಾಚರಣೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:40 IST
Last Updated 3 ಡಿಸೆಂಬರ್ 2022, 14:40 IST
ಹಾಸನದ ಸರ್ ಎಂ. ವಿಶ್ವೇಶ್ವರಯ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಹಾಸನದ ಸರ್ ಎಂ. ವಿಶ್ವೇಶ್ವರಯ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.   

ಹಾಸನ: ತಮ್ಮ ಸಮಸ್ಯೆಗಳನ್ನು ಹೊತ್ತು ಅಂಗವಿಕಲರು ಸರ್ಕಾರಿ ಕಚೇರಿಗಳಿಗೆ ಅಥವಾ ಇತರೆ ಸಂಘ ಸಂಸ್ಥೆಗಳಿಗೆ ಬಂದಾಗ ಅವರಿಗೆ ಮೊದಲ ಆದ್ಯತೆ ನೀಡುವ ಮೂಲಕ ಅವರ ಏಳ್ಗೆಗೆ ಸಹಕರಿಸಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ಅಂಗವಿಕಲರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಎಂ.ಜಿ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರನ್ನು ಸೌಜನ್ಯದಿಂದ ಕಾಣುವ ಮೂಲಕ, ಪರಸ್ಪರ ಸಹಕಾರ ನೀಡಬೇಕು. ಸರ್ಕಾರ ಅವರ ಜೀವನವನ್ನು ಉತ್ತಮ ಪಡಿಸಲು ಹಲವು ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದರು.

ADVERTISEMENT

ಈಗಗಲೇ ಅಂಗವಿಕಲರ ಸಂಘಕ್ಕೆ ನಿವೇಶನವನ್ನು ಒದಗಿಸಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಮಾತನಾಡಿ, ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಂಗವಿಕಲರ ಬದುಕು ಇತರರಿಗೆ ಸ್ಫೂರ್ತಿದಾಯಕವಾಗಿದ್ದು, ಅವರಲ್ಲಿ ನ್ಯೂನತೆಗಳು ಇದ್ದರೂ, ಬದುಕಿನಲ್ಲಿ ಎಲ್ಲವನ್ನೂ ಸಾಧಿಸುವ ಛಲ ಮತ್ತು ಬುದ್ಧಿಶಕ್ತಿ ಹೊಂದಿದ್ದಾರೆ. ತಮ್ಮ ಹಕ್ಕು ಬದ್ಧತೆಗಳನ್ನು ಪಡೆಯಲು ನೇರವಾಗಿ ಹೋರಾಡಬೇಕು ಎಂದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಅನುಪಮಾ ಕೆ.ಆರ್., ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ, ನಗರ ಸಭೆ ಪೌರಾಯುಕ್ತ ಪರಮೇಶ್ವರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಸ್‌. ಪ್ರಕಾಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮಹಾಂತಪ್ಪ, ಅಂತರರಾಷ್ಟ್ರೀಯ ಕ್ರೀಡಾಪಟು ಶಾಂತಕುಮಾರ್, ಸಣ್ಣಸ್ವಾಮಿ ಹಾಜರಿದ್ದರು.

ಯಶಸ್ವಿ ಜಾಥಾ

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು, ಭಿತ್ತಿ ಫಲಕವನ್ನು ತೋರುವ ಮೂಲಕ ಚಾಲನೆ ನೀಡಿದರು.

ನೂರಾರು ಅಂಗವಿಕಲರು ಜಿಲ್ಲಾ ಪಂಚಾಯಿತಿಯಿಂದ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಭವನದವರೆಗೆ ಸಾಗಿದರು. ಭಿತ್ತಿ ಫಲಕಗಳನ್ನು ಹಿಡಿದು, ಘೋಷಣೆಯನ್ನು ಕೂಗುವ ಮೂಲಕ ಅಂಗವಿಕಲರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಉಪ ಕಾರ್ಯದರ್ಶಿ ಪುನೀತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಉಸ್ಮಾನ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಅನುಪಮಾ ಕೆ.ಆರ್. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.