ADVERTISEMENT

ಹಾಸನ ಐಐಟಿಗೆ ಪಕ್ಷಾತೀತ ಸಹಕಾರ ನೀಡಿ: ರೇವಣ್ಣ

ಐಐಟಿಗೆ ಮೀಸಲಿಟ್ಟ ಜಾಗವನ್ನು ಅನ್ಯ ಉದ್ದೇಶಕ್ಕೆ ಬೇಡ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 16:44 IST
Last Updated 18 ಜನವರಿ 2023, 16:44 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕನಸಾದ ಐಐಟಿ ಸ್ಥಾಪನೆಗಾಗಿ ಮೀಸಲಿಟ್ಟಿರುವ 1024 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಹಾಗೂ ವಸತಿ ಅಭಿವೃದ್ಧಿಗೆ ಬಳಸಬಾರದು ಎಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಾಸನ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಗೆ ಬಹಳಷ್ಟು ಅನ್ಯಾಯವಾಗಿದೆ. ಇದೀಗ ಐಐಟಿ ಸ್ಥಾಪನೆಗೆ ಮೀಸಲಾದ ಜಾಗವನ್ನು ವಸತಿ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದರು.

ಐಐಟಿ ಸ್ಥಾಪನೆಗೆ ಭೂಮಿಯನ್ನು ಗುರುತಿಸಿ, ಸ್ವಾಧೀನ ಪಡಿಸುವ ಸಂದರ್ಭದಲ್ಲಿ ಪ್ರತಿ ಎಕರೆಗೆ ₹ 5 ಲಕ್ಷ ನಿಗದಿ ಮಾಡಿ ಕೃಷ್ಣೆಗೌಡ ಎಂಬುವವರು ಖರೀದಿ ಮಾಡಿದ್ದರು. ಆದರೆ ನನ್ನ ಮನವಿಗೆ ಸ್ಪಂದಿಸಿ ಐಐಟಿ ಸ್ಥಾಪನೆಗೆ ಭೂಮಿಯನ್ನು ಬಿಟ್ಟುಕೊಟ್ಟರು. ಕುಮಾರಸ್ವಾಮಿ ಅವರು ಅಧಿಕಾರ ಅವಧಿಯಲ್ಲಿ ಎಲ್ಲ ಪ್ರಕ್ರಿಯೆಯು ನಡೆಸಿ, ಕೇಂದ್ರ ಸರ್ಕಾರಕ್ಕೆ ದಾಖಲೆ ಒದಗಿಸಲಾಗಿತ್ತು. ಆದರೆ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹಾಸನಕ್ಕೆ ಬರಬೇಕಾದ ಐಐಟಿ ರಾಜಸ್ಥಾನಕ್ಕೆ ವರ್ಗವಾಯಿತು. ಸದ್ಯ ಹಾಸನದ ಯುವಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಐಐಟಿ ಸ್ಥಾಪನೆಗೆ ಸಹಕರಿಸಲು ಮನವಿ ಮಾಡಿದರು.

ADVERTISEMENT

ಸಾವಿರ ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಕೆಐಎಡಿಬಿ ವತಿಯಿಂದ ಕೈಗಾರಿಕಾ ವಲಯ ಮತ್ತು ವಸತಿ ಯೋಜನೆ ರಚಿಸಿ ಟೆಂಡರ್ ಕರೆದು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಈ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸದಂತೆ ಮುಖ್ಯಮಂತ್ರಿ ಸಹ ಟಿಪ್ಪಣಿ ಬರೆದಿದ್ದಾರೆ ಎಂದು ರೇವಣ್ಣ ಹೇಳಿದರು.

ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ ಎಚ್.ಡಿ. ದೇವೇಗೌಡರು ಐಐಟಿ ಸ್ಥಾಪನೆ ಕುರಿತು ಮಾತನಾಡಿದ್ದು, ಪ್ರಧಾನಿ ಸಹ ಆಶಾದಾಯಕ ಉತ್ತರ ನೀಡಿದ್ದು, ಜಿಲ್ಲೆಗೆ ಐಐಟಿ ತರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರ ಬೆಂಬಲ ಅಗತ್ಯವಿದೆ ಎಂದು ಹೇಳಿದರು.

ಒಂದು ವೇಳೆ ರಾಜ್ಯ ಸರ್ಕಾರ ಜಿಲ್ಲೆಯ ಜನತೆ ಆಶಯಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡರೆ, ಜಿಲ್ಲೆಯ ಶಾಸಕರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೇವಣ್ಣ ಎಚ್ಚರಿಸಿದರು.

‘ರೈಲು ಮಾರ್ಗಕ್ಕೆ ಜಮೀನು’

ಹಾಸನ– ಬೇಲೂರು– ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ 280 ಎಕರೆ ಜಮೀನು ಗುರುತಿಸಲಾಗಿದ್ದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿತ್ತು. ಅಗತ್ಯ ಭೂಮಿಯನ್ನು ಗುರುತಿಸುವಂತೆ ಅಂದಿನ ಕೇಂದ್ರ ಸಚಿವರು ಸೂಚನೆ ನೀಡಿದ್ದರು. ಇದೀಗ ಮುಖ್ಯಮಂತ್ರಿಗೆ ಮನವಿ ಮಾಡಿದ ನಂತರ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ರೇವಣ್ಣ ತಿಳಿಸಿದರು.

‘ಐಐಟಿಗೆ 260 ಎಕರೆ ಸಾಕು’

ಹಾಸನ: ಐಐಟಿ ಸ್ಥಾಪನೆ ಮಾಡಲು ಕೇವಲ 260 ಎಕರೆ ಜಾಗ ಸಾಕಾಗಲಿದ್ದು, 1024 ಎಕರೆ ವಶಪಡಿಸಿಕೊಂಡಿರುವುದು ಸರಿಯಲ್ಲ. ಮಾಜಿ ಪ್ರಧಾನಿ ದೇವೇಗೌಡರ ಕನಸು ನನಸು ಮಾಡುವ ಉದ್ದೇಶ ನನಗೂ ಇದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.

ಐಐಟಿ ಸ್ಥಾಪನೆ ಮಾಡಿದರೆ ಜಿಲ್ಲೆಗೆ ಹೆಮ್ಮೆ. ಆದರೆ ಉದ್ಯೋಗ ಸೃಷ್ಟಿ ಆಗುವುದಿಲ್ಲ. ಐಐಟಿ ಬದಲು ಕೈಗಾರಿಕೆ ಸ್ಥಾಪನೆ ಮಾಡಿದರೆ ಜಿಲ್ಲೆಯ ಪದವೀಧರರು, ಡಿಪ್ಲೊಮಾ, ಐಟಿಐ ಮುಗಿಸಿರುವ ಜಿಲ್ಲೆಯ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಬಹುದು ಎಂದರು.

ಎಚ್.ಡಿ. ರೇವಣ್ಣ ಅವರು ಐಐಟಿ ಸ್ಥಾಪನೆ ಮಾಡುವುದಾದರೆ ಹೊಳೆನರಸೀಪುರದಲ್ಲಿ ಮಾಡಲಿ. ಐಐಟಿಗಾಗಿ ಗುರುತಿಸಲಾಗಿರುವ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ, ವಸತಿ ಉದ್ದೇಶಗಳಿಗೆ ಬಳಸಲಾಗುತ್ತಿದ್ದು, ಕೃಷ್ಣ ಲೇ ಔಟ್ ಮಾದರಿಯಲ್ಲಿಯೇ ನಿವೇಶನ ನಿರ್ಮಾಣ ಹಾಗೂ ರೈತರಿಗೆ ಅಗತ್ಯ ಪರಿಹಾರ, ನಿವೇಶನ ಒದಗಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.