ADVERTISEMENT

ಕಾರ್ಮಿಕ ಕುಟುಂಬಕ್ಕೆ ಮಾಸಿಕ ₹ 5 ಸಾವಿರ ನೀಡಲಿ: ಎಚ್.ಡಿ.ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:37 IST
Last Updated 3 ಏಪ್ರಿಲ್ 2020, 16:37 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಕೊರೊನಾ ವೈರಸ್‌ ತಡೆಗೆ ಜಾರಿಯಲ್ಲಿರುವ ಲಾಕ್ ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಮಾಸಿಕ ₹ 5 ಸಾವಿರ ನೀಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಹೋಟೆಲ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಅಡುಗೆ ಕೆಲಸದವರು, ಆಟೊ ಚಾಲಕರು, ಕಟ್ಟಡ ಕಾರ್ಮಿಕರು ನಿತ್ಯದ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕೆಲಸವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಸರ್ಕಾರದ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಶೇಕಡಾ 30 ರಷ್ಟು ಕಾರ್ಮಿಕರು ಹಸಿವಿನಿಂದಲೇ ಸಾಯುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಬೆಳೆ ಮಾರಾಟ ಮಾಡದ ಸ್ಥಿತಿ ನಿರ್ಮಾಣ ವಾಗಿದೆ. ಟೊಮೆಟೊ, ಕಲ್ಲಂಗಡಿಯನ್ನು ಬೀದಿಗೆ ತಂದು ಸುರಿಯುತ್ತಿದ್ದಾರೆ. ಸರ್ಕಾರವೇ ಬೆಳೆ ಖರೀದಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ವಿರುದ್ಧ ಹೋರಾಟಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಸನ ಸಹಕಾರ ಹಾಲು ಒಕ್ಕೂಟ ನೀಡಿದ್ದ ₹ 25 ಕೋಟಿ ಹಣವನ್ನು ಸರ್ಕಾರ ವಾಪಸ್ ಕಳುಹಿಸಿದೆ. ಆ ಹಣವನ್ನು ಕೊಳಗೇರಿ ನಿವಾಸಿಗಳು, ಕಟ್ಟಡ ಕಾರ್ಮಿಕರು, ವಲಸಿಗರು, ಬಡವರಿಗೆ ನಿತ್ಯ ಉಚಿತವಾಗಿ ಹಾಲು ವಿತರಿಸಲು ಉಪಯೋಗಿಸುವಂತೆ ಪತ್ರ ಬರೆದಿದೆ ಎಂದು ವಿವರಿಸಿದರು.

ADVERTISEMENT

ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ₹ 2 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ, ಹಣವನ್ನು ಯಾವುದಕ್ಕೆ ಬಳಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ಬಂದಿಲ್ಲ ಎಂದು ಡಿಸಿ ಹೇಳುತ್ತಾರೆ. ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲ. ಇನ್ನು ಜನ ಸಾಮಾನ್ಯರ ಸಮಸ್ಯೆಗಳು ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿದರು.

ಕೆಲ ಸ್ವಯಂ ಸೇವಕರು ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕಲ್ಪಿಸಲು ವರ್ತಕರ ಬಳಿ ಬಲವಂತವಾಗಿ ಅಕ್ಕಿ, ಬೇಳೆ, ಎಣ್ಣೆ ಇತ್ಯಾದಿ ಸಾಮಗ್ರಿಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ ಎಂಬ ದೂರು ಬಂದಿದೆ. ಸ್ವಯಂ ಪ್ರೇರಿತವಾಗಿ ನೀಡಿದರೆ ತೆಗೆದುಕೊಳ್ಳಬೇಕು. ಯಾರನ್ನು ಬಲವಂತ ಮಾಡಬಾರದು. ಜಿಲ್ಲಾಡಳಿತ ಕೂಡಲೇ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.