ADVERTISEMENT

ಆಮ್ಲಜನಕ ಸಿಗದೆ ರೋಗಿ ಮೃತಪಟ್ಟರೆ ಸರ್ಕಾರವೇ ಹೊಣೆ: ಸರ್ಕಾರಕ್ಕೆ ರೇವಣ್ಣ ಎಚ್ಚರಿಕ

​ಪ್ರಜಾವಾಣಿ ವಾರ್ತೆ
Published 6 ಮೇ 2021, 12:57 IST
Last Updated 6 ಮೇ 2021, 12:57 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಉಂಟಾಗಿದ್ದು, ಆಮ್ಲಜನಕ ಸಿಗದೆ ರೋಗಿ ಮೃತಪಟ್ಟರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11 ಸಾವಿರ ತಲುಪಿದೆ. ಸೋಂಕಿತರಿಗೆ ಮೀಸಲಿರಿಸಿರುವ 2100 ಹಾಸಿಗೆಯೂ ಭರ್ತಿಯಾಗಿದೆ. ರೆಮ್‌ಡಿಸಿವಿರ್‌ ಚುಚ್ಚುಮದ್ದು ಹಾಗೂ ಆಮ್ಲಜನಕ ಕೊರತೆ ಉಂಟಾಗಿದೆ. ಆಮ್ಲಜನಕ ದಂಧೆ ನಡೆಯುತ್ತಿದ್ದು, ಖಾಸಗಿ ಸಂಸ್ಥೆಗಳ ಜತೆ ಜಿಲ್ಲಾಡಳಿತ ಶಾಮೀಲಾಗಿದೆ. ಚಾಮರಾಜನಗರ ಮತ್ತು ಕಲುಬುರ್ಗಿಯಲ್ಲಿ ನಡೆದ ದುರಂತ ಹಾಸನದಲ್ಲಿ ಮರಕಳುಹಿಸದಂತೆ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರತಿನಿತ್ಯ ಖಾಸಗಿ ಆಸ್ಪತ್ರೆಗಳಿಗೆ 400–500 ಆಮ್ಲಜನಕ ಸಿಲಿಂಡರ್‌ ಬೇಕಿದೆ. ಪ್ರಸ್ತುತ 650 ಸಿಲಿಂಡರ್ ಅಗತ್ಯವಿದ್ದು, 418 ಸಿಲಿಂಡರ್ ಮಾತ್ರ ಲಭ್ಯ ಇದೆ. ಇರುವುದರಲ್ಲಿಯೇ ಹೊಂದಾಣಿಕೆ ಮಾಡಲಾಗುತ್ತಿದೆ. ರೋಗಿಗಳು ಸಂಬಂಧಿಕರು ಕಾಳಸಂತೆಯಲ್ಲಿ ದುಪ್ಪಟ್ಟು ಹಣ ನೀಡಿ ಆಮ್ಲಜನಕ ಸಿಲಿಂಡರ್ ತರುತ್ತಿದ್ದಾರೆ ಎಂದರು.

ADVERTISEMENT

ನಗರದ ಸ್ಪರ್ಶ್‌ ಆಸ್ಪತ್ರೆಯಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ ₹ 18 ಸಾವಿರ ದರ ಇದೆ. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದರೂ ರೆಮ್‌ಡಿಸಿವಿರ್ ಪೂರೈಸಿಲ್ಲ. ಜನರ ಜೀವದ ಜತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕೊರೊನಾ ಸೋಂಕು ತಡೆಗೆ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಲಾಕ್‌ಡೌನ್‌ ಘೋಷಣೆ ಮಾಡಿದ ಒಂದು ತಾಸಿನಲ್ಲಿ ವಾಪಸ್‌ ಪಡೆದಿದ್ದಾರೆ. ಇದರಲ್ಲಿ ಜಿಲ್ಲಾಧಿಕಾರಿ, ಸಚಿವರ ಪಾತ್ರ ಇಲ್ಲ. ಆದರೆ ಎಲ್ಲರನ್ನು ನಿಯಂತ್ರಣ ಮಾಡುತ್ತಿರುವ ಆ ವ್ಯಕ್ತಿ ಯಾರೆಂಬುದು ಗೊತ್ತಿಲ್ಲ. ಪ್ರತಿ ತಾಲ್ಲೂಕಿಗೂ ₹25 ಲಕ್ಷ ಬಿಡುಗಡೆ ಮಾಡುವುದಾಗಿ ಹೇಳಿ ಈವರೆಗೂ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್‌ಡೌನ್‌ನಿಂದಾಗಿ ಬೀದಿ ವ್ಯಾಪಾರಿಗಳು, ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಅಕ್ಕಿ, ಗೋಧಿ, ₹ 2 ಸಾವಿರ ಸಹಾಯಧನ ನೀಡುವ ಮೂಲಕ ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಕೋವಿಡ್‌ ಪರೀಕ್ಷೆಗಳನ್ನು ಸರಿಯಾಗಿ ಮಾಡುತ್ತಿಲ್ಲ. ನಿಖರವಾಗಿ ತಪಾಸಣೆಗೆ ಒಳಪಡಿಸಿದರೆ ಜನಸಂಖ್ಯೆ ಶೇಕಡಾ 50ರಷ್ಟು ಮಂದಿಗೆ ಸೋಂಕು ತಗುಲಿರುತ್ತದೆ ಎಂದರು.

ಕೋವಿಡ್ ಸಂಕಷ್ಟದ ಸಮಯದಲ್ಲೂ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಹಿಂಸೆ ನೀಡುತ್ತಿದ್ದಾರೆ. ಹರದೂರು ನಾರಾಯಣ ಎಂಬುವರು ಗೊರೂರು ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಟ್ರ್ಯಾಕ್ಟರ್ ಸಾಲ ₹4.50 ಲಕ್ಷ ಪಡೆದಿದ್ದರು. ಆದರೆ, ಬಡ್ಡಿ ಸೇರಿ ₹16.50 ಲಕ್ಷ ನೀಡುವಂತೆ ಅಧಿಕಾರಿಗಳು ಪೀಡಿಸುತ್ತಿದ್ದಾರೆ. ಅವರು ಡಿ.ಸಿ ಕಚೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅನಾಹುತ ಸಂಭವಿಸಿದರೆ ಬ್ಯಾಂಕ್‌ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕಾಗುತ್ತದೆ ಎಂದರು

ಜಿಲ್ಲಾಧಿಕಾರಿ ಪಿ. ಡಿ ಖಾತೆಯಲ್ಲಿರುವ ₹7 ಕೋಟಿ ಹಣದಲ್ಲಿ ಯಾವ ತಾಲ್ಲೂಕಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ₹ 10 ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.