ADVERTISEMENT

'ಗೌಡರ ಕುಟುಂಬದಿಂದ ಹಾಲು ಉತ್ಪಾದಕರಿಗೆ ತೊಂದರೆ ಆಗಬಾರದು': ರೇವಣ್ಣ

ಕೆಎಂಎಫ್‌ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಲು ಕಾರಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 8:31 IST
Last Updated 31 ಆಗಸ್ಟ್ 2019, 8:31 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಿಂದ ಹಾಲು ಉತ್ಪಾದಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ದಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್‌ ಪಡೆಯಬೇಕಾಯಿತು’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

‘ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಹಿಂದೆ ನಮ್ಮದೇ ಪಕ್ಷದಲ್ಲಿ ಇದ್ದವರು. ನಾಯಕ ಸಮಾಜಕ್ಕೂ ಅವಕಾಶ ಸಿಗಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದಾಗ ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ ಈಗ ಮಾಡುತ್ತಿರುವುದೇನು’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕೆಎಂಎಫ್‌ನಎಂಟು ನಿರ್ದೇಶಕರು ಸಭೆ ನಡೆಸುತ್ತಿರುವಾಗಲೇ ಸಿ.ಎಂ ಕಚೇರಿಯಿಂದ ಕರೆ ಬಂದ ತಕ್ಷಣ ವ್ಯವಸ್ಥಾಪಕ ನಿರ್ದೇಶಕರು ಎದ್ದು ಹೋದರು. ಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನವೇ ಸಂಜೆ 7.30ಕ್ಕೆ ಕೆಎಂಎಫ್‌ ಚುನಾವಣೆಗೆ ಸಂಬಂಧಿಸಿದ ಮೊದಲ ಕಡತ ತರಿಸಿಕೊಂಡರು. ಡೇರಿ ಕ್ಷೇತ್ರ ಬೆಳೆಯಲು ಕ್ಷೀರ ಕ್ರಾಂತಿಯ ಹರಿಕಾರ ವರ್ಗಿಸ್ ಕುರಿಯನ್, ದೇವೇಗೌಡರು ಕಾರಣ. ಎಲ್ಲಿಯವರೆಗೂ ದ್ವೇಷದ ರಾಜಕಾರಣ ಮಾಡುತ್ತಾರೋ ನಾನು ನೋಡುತ್ತೇನೆ’ ಎಂದು ಕಿಡಿಕಾರಿದರು.

ADVERTISEMENT

‘ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ವಿಭಜಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ರೇವಣ್ಣ, ಹಾಸನ ಜಿಲ್ಲೆಯಿಂದ ದಿನಕ್ಕೆ10 ಲಕ್ಷ ಲೀಟರ್‌, ಚಿಕ್ಕಮಗಳೂರು ಜಿಲ್ಲೆಯಿಂದ 1 ಲಕ್ಷ ಲೀಟರ್‌ ಹಾಲು ಪೂರೈಕೆ ಆಗುತ್ತಿದೆ. ಒಂದು ಡೇರಿ ಸ್ಥಾಪನೆಗೆ ₹ 300 ಕೋಟಿ ಅಗತ್ಯವಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುವುದು. ಆದರೂ ಸಹಕಾರ ನೀಡುವೆ’ ಎಂದರು.

‘ಕೆಎಂಎಫ್‌ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಂಬಳ, ಪ್ರಯಾಣ, ದಿನ ಭತ್ಯೆ ಪಡೆದಿಲ್ಲ. ನನಗೆ ಅಧಿಕಾರಕ್ಕಿಂತ ಜನರ ಹಿತ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.