ADVERTISEMENT

ಹೇಮಾವತಿ ಅಧ್ಯಕ್ಷೆ, ಪುಟ್ಟಸ್ವಾಮಿ ಉಪಾಧ್ಯಕ್ಷ

ಅಪಹರಣ ಪ್ರಕರಣ ಹಿನ್ನೆಲೆ ಭಾರಿ ಭದ್ರತೆಯಲ್ಲಿ ನಡೆದ ಕೋಗಿಲಮನೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 3:15 IST
Last Updated 5 ಫೆಬ್ರುವರಿ 2021, 3:15 IST
ಬೇಲೂರು ತಾಲ್ಲೂಕಿನ ಕೋಗಿಲಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೇಮಾವತಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಬೇಲೂರು ತಾಲ್ಲೂಕಿನ ಕೋಗಿಲಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೇಮಾವತಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ಬೇಲೂರು: ತಾಲ್ಲೂಕಿನ ಕೋಗಿಲಮನೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪುಟ್ಟಸ್ವಾಮಿ ಆಯ್ಕೆಯಾದರು.

8 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ನಿಗದಿಯಾಗಿತ್ತು.

8 ಸದಸ್ಯರಲ್ಲಿ ತಲಾ 4 ಸದಸ್ಯರ ಸಮಬಲದ ಎರಡು ಗುಂಪುಗಳು ತಮ್ಮದೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಕಸರತ್ತು ಆರಂಭಿಸಿದ್ದರು. ಇದೇ ಕಾರಣಕ್ಕೆ ಸದಸ್ಯರೊಬ್ಬರ ಅಪಹರಣವೂ ನಡೆದಿತ್ತು.

ADVERTISEMENT

ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಆಕಾಂಕ್ಷಿಗಳಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಹಾಗೂ
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಿ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪುಟ್ಟಸ್ವಾಮಿ ಹಾಗೂ ಬಿಜೆಪಿ ಬೆಂಬಲಿತ ಎಂ.ಎಂ. ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಗೌಪ್ಯ ಮತದಾನದಲ್ಲಿ ಹೇಮಾವತಿ ಪರವಾಗಿ 5 ಮತಗಳು ಸಾವಿತ್ರಿ ಅವರಿಗೆ ಮೂರು ಮತಗಳು ಬಂದವು.

ಲಾಟರಿಯಲ್ಲಿ ಜಯ

ಉಪಾಧ್ಯಕ್ಷ ಚುನಾವಣೆಯಲ್ಲಿ ಪುಟ್ಟಸ್ವಾಮಿ ಹಾಗೂ ಎಂ.ಎಂ. ಶಿವಕುಮಾರ್ ಇಬ್ಬರಿಗೂ ತಲಾ 4 ಮತಗಳು ಬಂದಿದ್ದರಿಂದ ನಿಯಮಾನುಸಾರ ಚುನಾವಣಾಧಿಕಾರಿ ಅವರು, ಲಾಟರಿ ಮೂಲಕ ಆಯ್ಕೆ ಮಾಡಿದಾಗ ವಿಜಯಮಾಲೆ ಪುಟ್ಟಸ್ವಾಮಿ ಪರವಾಗಿತ್ತು.

ಆಗ ಚುನಾವಣಾಧಿಕಾರಿ ಚಲುವರಾಜ್ ಅಧಿಕೃತ ಆಯ್ಕೆಯನ್ನು ಘೋಷಿಸಿದರು.

ಭದ್ರತೆ: ಕಳೆದ ಎರಡು ದಿನದ ಹಿಂದೆ ನಡೆದ ಪಂಚಾಯಿತಿ ಸದಸ್ಯ ಎಂ.ಎಂ. ಶಿವಕುಮಾರ್ ಅಪಹರಣ ಹಾಗೂ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಚುನಾವಣೆ ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಸಿಪಿಐ ಸಿದ್ದರಾಮೇಶ್ವರ್, ಬೇಲೂರು ಪಿಎಸ್‌ಐ ಶಿವನಗೌಡ ಪಾಟೀಲ್, ಅರೇಹಳ್ಳಿ ಪಿಎಸ್‌ಐ ಮಹೇಶ್ ಹಾಗೂ ಪಿಎಸ್‌ಐ ಶಕುಂತಲಾ, ಜಿಲ್ಲಾ ಮೀಸಲು ಪೊಲೀಸರು ಮತ್ತು ತಹಶೀಲ್ದಾರ್ ಎನ್.ವಿ.ನಟೇಶ್ ಇದ್ದು ಭದ್ರತೆ ವ್ಯವಸ್ಥೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.