ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ದುರಸ್ತಿಗೆ, ನೂತನ ಶವಗಾರ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹೋಬಳಿ ಕೇಂದ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಲೆಂದು ನನ್ನ ಹಿಂದಿನ ಅವಧಿಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಇದರಿಂದ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿದೆ. ಇದರ ಜೊತೆಗೆ ಆರೋಗ್ಯ ಸಚಿವರಿಗೆ ತಾಲ್ಲೂಕಿನ ವಿವಿಧ ಆಸ್ಪತ್ರೆಗಳ ನವೀಕರಣಕ್ಕೆ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸರ್ಕಾರ ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಹಾಗೂ ಶವಗಾರ ನಿರ್ಮಾಣಕ್ಕೆ ಸುಮಾರು ₹50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಮಧುಮೇಹರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಎಬಿಆರ್‌ಕೆ ಅನುದಾನವನ್ನು ಬಳಸಿ ಎಚ್ಎಐಸಿ ಪರೀಕ್ಷಾ ಯಂತ್ರವನ್ನು ಸದ್ಯದಲ್ಲೇ ಖರೀದಿಸುವಂತೆ ಆಸ್ಪತ್ರೆಯ ಆಡಳಿತ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸದ್ಯ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಹುದ್ದೆ ಖಾಲಿ ಇದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಖಾಲಿ ಹುದ್ದೆ ತುಂಬಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಹಾಗೂ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಹೆಚ್ಚಿನ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಾರೆ. ಅವರ ವೇತನ ಹೆಚ್ಚಳ ಮಾಡುವಂತೆ ಹಿಂದೆ ಕಳೆದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೆ. ಆದರೆ ಸರ್ಕಾರ ಕೇವಲ ₹1 ಸಾವಿರ ಮಾತ್ರ ಹೆಚ್ಚಳ ಮಾಡಿದೆ. ಕನಿಷ್ಠ ಮಾಸಿಕ ಅವರಿಗೆ ₹15 ಸಾವಿರ ವೇತನ ನೀಡುವಂತೆ ಒತ್ತಾಯಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಮಾತನಾಡಿ, ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ರಕ್ತದಾನ ಮಾಡಿದರೆ ರಕ್ತ ಶುದ್ಧಿಯಾಗುತ್ತದೆ. ಯಾವುದೇ ಆತಂಕ ಪಡದೆ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಬೃಹತ್ ರಕ್ತದಾನ ಶಿಬಿರದಲ್ಲಿ ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಭರತ್ ರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಜನರನ್ನು ಪ್ರೇರೇಪಿಸಿದರು. ಬೆಳಿಗ್ಗೆಯಿಂದ ನಡೆದ ಶಿಬಿರದಲ್ಲಿ ಸುಮಾರು 140 ಜನ ಕಣ್ಣಿನ ಪರೀಕ್ಷೆಗೆ ಒಳಗಾದರೂ. 314 ಜನ ವಿವಿಧ ಕಾಯಿಲೆಗಳ ತಪಾಸಣೆ ಮಾಡಿಸಿದರು. 38 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ. ವಿಠಲ್ ಕುಮಾರ್, ಕ್ಯಾನ್ಸರ್ ತಜ್ಞ ಡಾ. ಗುಲ್ಜಾರ್, ಡಾ.ಅರ್ಷಿತ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುಹಾಸ್, ಡಾ. ರಮ್ಯ, ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಕುಮಾರ್ ಎಚ್.ಜಿ, ಸಂಸ್ಥೆ ಕಾರ್ಯದರ್ಶಿ ಜಬಿವುಲ್ಲಾ, ನಿರ್ದೇಶಕ ಉದಯಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾಮಣಿ ಹರೀಶ್, ಕೃಷಿ ಪತ್ತಿನ ನಿರ್ದೇಶಕ ತೋಟಿ ನಾಗರಾಜ್, ಗ್ರಾಪಂ ಸದಸ್ಯರಾದ ಎನ್ ಆರ್ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.