ADVERTISEMENT

ಪ್ರೀತಿ, ವಿಶ್ವಾಸದಿಂದ ಮಾತ್ರ ಸಾಧನೆ ಸಾಧ್ಯ

ಗುರು ಪೂರ್ಣಿಮೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:04 IST
Last Updated 11 ಜುಲೈ 2025, 6:04 IST
ಹಳೇಬೀಡು ಸಮೀಪದ ಪುಷ್ಪಗಿರಿಯ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಗುರುಪೂರ್ಣಿಮೆ ಹಾಗೂ ಗುರು ವಂದನೆ ಕಾರ್ಯಕ್ರಮದಲ್ಲಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಕುಟುಂಬದವರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು 
ಹಳೇಬೀಡು ಸಮೀಪದ ಪುಷ್ಪಗಿರಿಯ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಗುರುಪೂರ್ಣಿಮೆ ಹಾಗೂ ಗುರು ವಂದನೆ ಕಾರ್ಯಕ್ರಮದಲ್ಲಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಕುಟುಂಬದವರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು    

ಹಳೇಬೀಡು: ಹಣ, ಆಸ್ತಿ, ಅಧಿಕಾರ ಶಾಶ್ವತವಾಗಿರುವುದಿಲ್ಲ. ಪ್ರೀತಿ, ವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು ಎಂದು ಪುಷ್ಪಗಿರಿ ಮಠದ  ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪುಷ್ಪಗಿರಿಯಲ್ಲಿ ಶುಕ್ರವಾರ ನಡೆದ ಗುರುಪೂರ್ಣಿಮೆ ಹಾಗೂ ಗುರುವಂದನೆ ಸಂದರ್ಭ ಅವರು ಆಶೀರ್ವಚನ ನೀಡಿದರು.

ಭಕ್ತರು ಮಠದ ಆಸ್ತಿ. ಭಕ್ತರು ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯದಿಂದ ಬದುಕು ಸಾಗಿಸಿದರೆ, ಮಠದ ಬೆಳವಣಿಗೆಯೊಂದಿಗೆ ಅವರ ಬದುಕು ಕೂಡ ಹಸನಾಗುತ್ತದೆ  ಎಂದರು.

ADVERTISEMENT

  ಜ್ಞಾನ ಪಡೆಯಲು ಗುರುಗಳ ಅಗತ್ಯವಿದೆ. ಜ್ಞಾನದಿಂದ ಜೀವನ ಸುಗಮವಾಗಿರುತ್ತದೆ‌.  ಎಲ್ಲರಿಗೂ ಶಿಕ್ಷಣ ಕೊಡಿಸಲು ಪೂರ್ವ ಪ್ರಾಥಮಿಕ ಶಾಲೆಯಿಂದ ವೈದ್ಯಕೀಯ ಕಲಿಕೆವರೆಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.

ತಹಶೀಲ್ದಾರ್ ಶ್ರೀಧರ್ ಕಂಕನಾಡಿ ಮಾತನಾಡಿದರು. ಶರಣ ಸಂಸ್ಕೃತಿ ಚಿಂತಕ  ಜಿ.ವಿ.ಮಂಜುನಾಥ್, ಜಾನಪದ ತಜ್ಞ ಬಾ.ಶಂಭು ಬಳಿಗಾರ್ ಇಳಕಲ್ ಉಪನ್ಯಾಸ ನೀಡಿದರು. ಗ್ರಾನೈಟ್ ರಾಜಶೇಖರ್, ಪ್ರಭಾ ರಾಜಶೇಖರ್ ಕುಟುಂಬದಿಂದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಬೆಳ್ಳಿ ಕಿರೀಟ, ಬೆಳ್ಳಿ ಗದೆ ನೀಡಿ ಪಾದಪೂಜೆ ನೆರವೇರಿಸಲಾಯಿತು.

ಪುಷ್ಪಗಿರಿ ಕಲಾ ತಂಡದ ಚಂದನ್ ಕುಮಾರ್ ತಂಡದವರು ವಚನ ಹಾಗೂ ಜನಪದ ಗೀತೆ ಹಾಡಿದರು. ಹಾಸನ ಆಕಾಶವಾಣಿ ಮುಖ್ಯಸ್ಥ  ವಿಜಯ್ ಅಂಗಡಿ, ಪತ್ರಕರ್ತರ ಸಂಘದ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥ್ ಅವರನ್ನು ಸನ್ಮಾನಿಸಲಾಯಿತು.

 ಮಠದ ಆಡಳಿತಾಧಿಕಾರಿ ಚಿಟ್ಟಿಹಳ್ಳಿ ಕಿಟ್ಟಪ್ಪ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಹೆಬ್ಬಾಳ್ ಹಾಲಪ್ಪ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಬಸವರಾಜು. ಪ್ಲಾಂಟರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್, ಆಕಾಶವಾಣಿ ಕೃಷಿರಂಗ ವಿಭಾಗ ಮುಖ್ಯಸ್ಥ ಅರಕಲಗೂಡು ಮಧುಸೂದನ್ , ಸಂಸ್ಕೃತ ಉಪನ್ಯಾಸಕ ಲಕ್ಷ್ಮಿ ನಾರಾಯಣ ಭಾಗವಹಿಸಿದ್ದರು. 

Quote - ಋಷಿ ಮುನಿಗಳು ಭಾರತ ದೇಶವನ್ನು ಕಟ್ಟಿ ಬೆಳೆಸಿದ್ದಾರೆ. ಈಗ ದೇಶ ನಡೆಸಲು ಮುಂದಾಗಿರುವ ರಾಜಕಾರಣಿಗಳು ದೇಶವನ್ನು ಭದ್ರಪಡಿಸಬೇಕು. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ

Cut-off box - ‘ವೈದ್ಯಕೀಯ ಕಾಲೇಜು ಶೀಘ್ರ’ ಪುಷ್ಪಗಿರಿ ಮಠಕ್ಕೆ ಪ್ರಾಚಿನ ಇತಿಹಾಸ ಹೊಂದಿದೆ. ಹಿಂದೆ ಬರಗಾಲ ಬಂದಿದ್ದರಿಂದ ಪುಷ್ಪಗಿರಿ ಮಠ ಚಿಲ್ಕೂರಿಗೆ ಸ್ಥಳಾಂತರ ಆಯಿತು. ಪುಷ್ಪಗಿರಿಯ ಗುರುಗಳು ಹೊಯ್ಸಳ ರಾಜರಿಗೆ ಮಾರ್ಗದರ್ಶಕರಾಗಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದು ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಹೇಳಿದರು. ‘2007ರ ಗುರುಪೂರ್ಣಿಮೆಯಂದು ಸನ್ಯಾಸ ಸ್ವೀಕರಿಸಿದ ಸೋಮಶೇಖರ ಶಿವಾಚಾರ್ಯರು ಸ್ವಾಮೀಜಿ ಶ್ರೀಮಠದ ಅಭಿವೃದ್ಧಿ ಮಾಡುತ್ತಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಮಠ ಸಿದ್ಧತೆ ನಡೆಸಿದೆ. ಸದ್ಯಕ್ಕೆ ನರ್ಸಿಂಗ್ ಕಾಲೇಜು ಆರಂಭವಾಗಿದೆ. ₹100 ಕೋಟಿ ವೆಚ್ಚದ 400 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಭಕ್ತರ ನೆರವಿನಿಂದ ಆರಂಭವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.