ADVERTISEMENT

ಹಳ್ಳಿಮೈಸೂರು | ಹಳ್ಳಿ ಶಾಲೆಯ ಸಾಧನೆ ಅದ್ಭುತ: ಸಂಸದ ಶ್ರೇಯಸ್‌ ಎಂ. ಪಟೇಲ್

ಹಳ್ಳಿಮೈಸೂರು ಸರ್ಕಾರಿ ಶಾಲೆಯ 125 ನೇ ಸಂಭ್ರಮದಲ್ಲಿ ಸಂಸದ ಶ್ರೇಯಸ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:30 IST
Last Updated 21 ಫೆಬ್ರುವರಿ 2026, 4:30 IST
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ 125 ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಸಂಸದ ಶ್ರೇಯಸ್‌ ಪಟೇಲ್ ಉದ್ಘಾಟಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ 125 ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಸಂಸದ ಶ್ರೇಯಸ್‌ ಪಟೇಲ್ ಉದ್ಘಾಟಿಸಿದರು.   

ಹಳ್ಳಿಮೈಸೂರು(ಹೊಳೆನರಸೀಪುರ): ಸರ್ಕಾರಿ ಶಾಲೆ ನಿರಂತರ 125 ವರ್ಷ ಯಶಸ್ವಿಯಾಗಿ ನಡೆಯಲು, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು ಕಾರಣ. ಈ ಶಾಲೆಯನ್ನು 125 ವರ್ಷ ಸಮರ್ಥವಾಗಿ ಮುನ್ನೆಡೆಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಸಂಸದ ಶ್ರೇಯಸ್‌ ಎಂ. ಪಟೇಲ್ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 125 ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

125 ವರ್ಷಗಳ ಹಿಂದೆ ಇದ್ದ ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆದಿದ್ದಾರೆ. ಇದೇ ಶಾಲೆಯಲ್ಲಿ ಓದಿ ನಮ್ಮ ಜೊತೆ ಇರುವ ಡಾ. ರವಿಕುಮಾರ್, ಮುಖ್ಯಮಂತ್ರಿ  ಆರೋಗ್ಯ ಸಲಹೆಗಾರರಾಗಿದ್ದಾರೆ, ಉದೇಶ್ ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಆಗಿದ್ದಾರೆ. ಜಿ.ಪಿ. ದೇವರಾಜು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಆಗಿದ್ದಾರೆ. ಇನ್ನೂ ಅನೇಕರು ದೊಡ್ಡ ಹುದ್ದೆಯಲ್ಲಿದ್ದು, ಈ ಶಾಲೆಯ ಗೌರವ ಹೆಚ್ಚಿಸಿದ್ದಾರೆ. ಇದು ನಮ್ಮೆ ಹೆಮ್ಮೆ . ಶಾಲೆಗೆ ಕೆಲವು ಅಗತ್ಯ ಸೌಲಭ್ಯಗಳನ್ನು ಕೇಳಿದ್ದಾರೆ. ಆದ್ಯತೆ ಮೇಲೆ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದರು.

ADVERTISEMENT

 ಎಸ್ಪಿ ಉದೇಶ್ ಮಾತನಾಡಿ, ನಾನು 3 ರಿಂದ 7 ನೇ ತರಗತಿಯವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಆಗ ಹಾಜರಾದ ವಿದ್ಯಾರ್ಥಿಗಳನ್ನು ಲೆಕ್ಕ ಹಾಕಿ ಬೋರ್ಡ್‌ ಮೇಲೆ ಬರೆಯಲು ತಿಂಗಳಿಗೊಮ್ಮೆ ನನಗೆ ಅವಕಾಶ ಸಿಗುತ್ತಿತ್ತು. ಅದು ನನಗೆ ಅವಿಸ್ಮರಣೀಯ. ಅಂದಿನ ಶಿಕ್ಷಕರು  ಜೀವನದ ಪಾಠಗಳನ್ನೂ ಹೇಳಿ ಕೊಡುತ್ತಿದ್ದರು. ಆಟ ಆಡಿದರೂ ನಮ್ಮನ್ನು ದಂಡಿಸುತ್ತಿರಲಿಲ್ಲ.  ಭರವಸೆ ಮೂಡುವಂತೆ ಹುರಿದುಂಬಿಸುತ್ತಿದ್ದರು.  ಸರ್ಕಾರಿ ಶಾಲೆಗಳಲ್ಲಿ ಇಂದಿನಂತೆ ಸೌಲಭ್ಯ ಇರುತ್ತಿರಲಿಲ್ಲ. ಆದರೂ  ಚೆನ್ನಾಗಿ ವ್ಯಾಸಂಗ ಮಾಡಿದೆವು ಎಂದು ನೆನಪಿಸಿಕೊಂಡರು.

  ಜಿ.ಪಿ. ದೇವರಾಜು ಮಾತನಾಡಿ,  ಮೇಷ್ಟ್ರು ನಮ್ಮ ಕೈಯಲ್ಲೇ ಶಾಲೆಯ ಕಸ ಗುಡಿಸುತ್ತಿದ್ದರು.  ಕೆರೆಯಿಂದ ಕುಡಿಯುವ ನೀರು ತಂದಿಡಬೇಕಿತ್ತು. ಕೆರೆಯಲ್ಲಿ ಈಜಾಡಿ, ಕಟ್ಟೆಯಲ್ಲಿ ಒದ್ದಾಡಿ, ಮಣ್ಣಿನಲ್ಲಿ ಆಟ ಆಡಿ ಒರಟಾಗಿ ಬೆಳೆದೆವು.  ಶಿಕ್ಷಕರು   ತಿದ್ದಿದ್ದರಿಂದ ಇಂದು ಉನ್ನತ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.  ಡಾ. ರವಿಕುಮಾರ್ ಮಾತನಾಡಿ, ನಾನು ಓದಿದ ಈ ಶಾಲೆ ಸಾಧನೆ ಮಾಡಿ ಪಿಎಂಶ್ರೀ ಶಾಲೆ ಎನಿಸಿರುವುದು ಗೌರವವನ್ನು ಹೆಚ್ಚಿಸಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಚ್.ಎಸ್. ಪುಟ್ಟಸೋಮಪ್ಪ, ಉಪತಹಶೀಲ್ದಾರ್ ಎಚ್.ಎಂ. ಶಿವಕುಮಾರ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಭರತ್, ಮುಖ್ಯ ಶಿಕ್ಷಕಿ ಮಿತ್ರಾದೇವಿ ಶಿಕ್ಷಣ ಇಲಾಖೆಯ ಸಿಆರ್‌ಪಿ ನಟೇಶ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.