ADVERTISEMENT

ಹಾಲು ಉತ್ಪಾದಕರು, ರಾಸುಗಳಿಗೆ ವಿಮೆ ನೀಡಲಾಗುವುದು: ಎಚ್.ಡಿ.ರೇವಣ್ಣ

ಹಾಲು ಉತ್ಪಾದಕರಿಗೆ ಪ್ರತಿ ಕೆ.ಜಿ.ಗೆ ₹ 29 ಗರಿಷ್ಟ ದರ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 12:36 IST
Last Updated 1 ಜನವರಿ 2020, 12:36 IST
ಎಚ್‌.ಡಿ.ರೇವಣ್ಣ‌
ಎಚ್‌.ಡಿ.ರೇವಣ್ಣ‌   

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಹಾಮೂಲ್‌) ವತಿಯಿಂದ ಪ್ರಥಮ ಬಾರಿಗೆ ಹಾಲು ಉತ್ಪಾದಕರು ಹಾಗೂ ರಾಸುಗಳಿಗೆ ವಿಮೆ ಒದಗಿಸಲು ₹ 4 ಕೋಟಿ ಅನುದಾನ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಹೇಳಿದರು.

ರೈತರು ಶೇಕಡಾ 40, ಉಳಿದ ಮೊತ್ತವನ್ನು ಒಕ್ಕೂಟ ಭರಿಸಲಿದೆ. ರೈತರು ಅಕಾಲಿಕ ಮರಣ ಹೊಂದಿದರೆ ₹ 2 ಲಕ್ಷ ಪರಿಹಾರ ನೀಡಲಾಗುವುದು. ಅಂದಾಜು 30 ಸಾವಿರ ಹಾಲು ಉತ್ಪಾದಕರು ಹಾಗೂ 50 ಸಾವಿರ ರಾಸುಗಳನ್ನು ವಿಮೆಗೆ ಒಳಪಡಿಸಲು ಗುರಿ ಹೊಂದಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಕ್ಕೂಟವು ಪ್ರಸಕ್ತ ಸಾಲಿನಲ್ಲಿ ಗಳಿಸಿರುವ ಲಾಭವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವ ದೃಷ್ಟಿಯಿಂದ ಖರೀದಿ ದರಗಳನ್ನು ಪ್ರತಿ ಕೆ.ಜಿ. ಗೆ ₹ 1.50 ರಂತೆ ಹೆಚ್ಚಿಸಿದ್ದು, ಶೇಕಡಾ 3.5 ಜಿಡ್ಡು ಮತ್ತು ಶೇಕಡಾ 8.5 ಎಸ್‌ಎನ್‌ಎಫ್‌ ಹಾಲಿಗೆ ಪ್ರತಿ ಕೆ.ಜಿ.ಗೆ ಕನಿಷ್ಠ ₹ 29 ದರ ನಿಗದಿಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಅತಿ ಹೆಚ್ಚಿನ ದರ ಆಗಿದೆ. ಇದರಿಂದ ಪ್ರತಿ ತಿಂಗಳು ₹ 6.5 ಕೋಟಿ ಹೆಚ್ಚುವರಿ ವೆಚ್ಚ ಬರುತ್ತಿದ್ದು, ಮಾರ್ಚ್‌ ಅಂತ್ಯದವರೆಗೆ ಸುಮಾರು ₹ 25 ಕೋಟಿ ಹೆಚ್ಚುವರಿ ಖರೀದಿ ವೆಚ್ಚ ಭರಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಅಂದಾಜು ₹ 150 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ ಪ್ರತಿ ಗಂಟೆಗೆ 30 ಸಾವಿರ ಲೀಟರ್‌ ಪೆಟ್‌ ಬಾಟಲ್‌ನಲ್ಲಿ ಸುವಾಸಿತ ಹಾಲು ಉತ್ಪಾದಿಸುವ ಕೆಲಸ ಪ್ರಗತಿಯಲ್ಲಿದ್ದು, ಏಪ್ರಿಲ್‌ ವೇಳೆಗೆ ಕಾರ್ಯಾರಂಭ ಮಾಡಲಿದೆ. ಒಂದು ಲೀಟರ್‌ ಮತ್ತು 20 ಎಂ.ಎಲ್‌ ನಲ್ಲಿ ಹತ್ತು ಸ್ವಾದಗಳಲ್ಲಿ ಉತ್ಪಾದಿಸುತ್ತಿದ್ದು, ದೇಶ ವ್ಯಾಪಿ ಮಾರುಕಟ್ಟೆ ಮಾಡಲು ಉದ್ದೇಶಿಸಲಾಗಿದೆ. ಇದು ದೇಶದ ಮೂರನೇ ಹಾಗೂ ರಾಜ್ಯದ ಪ್ರಥಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಮಾರ್ಚ್‌ ಅಂತ್ಯಕ್ಕೆ ಸುಮಾರು ₹ 15 ಕೋಟಿ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಮೂರು ತಿಂಗಳವರೆಗೆ ಕೆಡದಿರುವಂಥ ಯುಎಚ್‌ಟಿ ( ಅಲ್ಟ್ರಾ ಹೀಟ್‌ ಟ್ರೀಟ್‌ಮೆಂಟ್ ಟೆಕ್ನಾಲಜಿ–ವಾತಾವರಣದ ತಾಪಮಾನದಲ್ಲಿ ಬಾಳಿಕೆಯನ್ನು ವೃದ್ಧಿಸುವ) ತಂತ್ರಜ್ಞಾನದಲ್ಲಿ ಪ್ಯಾಕ್‌ ಮಾಡುವ ಘಟಕ ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ನುಡಿದರು.

ಕೌಶಿಕ ಸಮೀಪ 50 ಎಕರೆ ಜಾಗದಲ್ಲಿ ₹ 504 ಕೋಟಿ ವೆಚ್ಚದಲ್ಲಿ ಮೆಗಾಡೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಚನ್ನಪಟ್ಟಣ ಬಳಿ ನಿರ್ಮಿಸಿರುವ ಕಲ್ಯಾಣಮಂಟಪವನ್ನು ಹದಿನೈದು ದಿನಗಳಲ್ಲಿ ಆರಂಭಿಸಲು ನಿರ್ಧರಿಸಿದ್ದು, ಬಡ ರೈತರಿಗೆ ರಿಯಾಯಿತಿ ನೀಡಲಾಗುವುದು ಎಂದರು.

ದಿನಕ್ಕೆ 10 ಲಕ್ಷ ಲೀಟರ್‌ ಹಾಲು ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿದೆ. ಕೆಎಂಎಫ್‌ ನ 3 ಲಕ್ಷ ಲೀಟರ್‌ ಹಾಲು ಮಾರಾಟಕ್ಕೆ ಅವಕಾಶ ನೀಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಅನುಮತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ ತಯಾರಿಸಲಾಗುತ್ತಿದೆ. ಆದರೆ, ಉತ್ತಮ ದರ ಇದ್ದಾಗ ಯಾವುದೇ ಸಮಸ್ಯೆ ಇಲ್ಲ. ಕೆ.ಜಿ. 200ಕ್ಕಿಂತ ಕಡಿಮೆ ಇದ್ದಾಗ ನಷ್ಟವಾಗುತ್ತದೆ ಎಂದು ಹಾಮೂಲ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.