ADVERTISEMENT

ಹಾಸನ: ಹನುಮೋತ್ಸವದಲ್ಲಿ ಮಿಂದೆದ್ದ ಭಕ್ತಾದಿಗಳು

ಚೆಂಡೆ, ಡೊಳ್ಳು, ಪೂಜಾ ಕುಣಿತದೊಂದಿಗೆ ಸಾಗಿದ ಅದ್ಧೂರಿ ಮೆರವಣಿಗೆ: ನೃತ್ಯದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:32 IST
Last Updated 14 ಡಿಸೆಂಬರ್ 2025, 8:32 IST
ಶನಿವಾರ ಆಯೋಜಿಸಿದ್ದ ಹನುಮೋತ್ಸವದ ಶ್ರೀರಾಮ, ಹನುಮನ ರಥಗಳಿಗೆ ಹೊಳೆನರಸೀಪುರದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಗಣ್ಯರು ಚಾಲನೆ ನೀಡಿದರು
ಶನಿವಾರ ಆಯೋಜಿಸಿದ್ದ ಹನುಮೋತ್ಸವದ ಶ್ರೀರಾಮ, ಹನುಮನ ರಥಗಳಿಗೆ ಹೊಳೆನರಸೀಪುರದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಗಣ್ಯರು ಚಾಲನೆ ನೀಡಿದರು   

ಹೊಳೆನರಸೀಪುರ: ಹನುಮೋತ್ಸವ ಸೇವಾ ಸಮಿತಿಯಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ 2ನೇ ವರ್ಷದ ಹನುಮೋತ್ಸವದಲ್ಲಿ ಸಹಸ್ರಾರು ಜನರು ಭಕ್ತಿಯಲ್ಲಿ ಮಿಂದೆದ್ದರು.

ನಿಗದಿತ ಸಮಯದಂತೆ ಬೆಳಿಗ್ಗೆ 9ಗಂಟೆ ವೇಳೆಗೆ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮುಂದೆ ಬಳಿ ಅಂಗಿ, ಕೇಸರಿ ಶಲ್ಯ ತೊಟ್ಟ ಸಾವಿರಾರು ಜನರು, ಗಣ್ಯರು ಸೇರಿ, ಶ್ರೀರಾಮ, ಹನುಮನ ರಥಕ್ಕೆ ಚಾಲನೆ ನೀಡಿದರು.

ಚೆಂಡೆ ವಾದ್ಯ, ಡೊಳ್ಳು ಕುಣಿತ, ಪೂಜಾ ಕುಣಿತದ ತಂಡಗಳು, ದೊಡ್ಡ ಬೊಂಬೆಗಳು ಮುಂದೆ ಸಾಗುತ್ತಿದ್ದಂತೆ ಮಹಿಳೆಯರು, ಯುವತಿಯರು, ಯುವಕರು, ಸೇರಿದಂತೆ ಸಾವಿರಾರು ಜನರು ಡಿಜೆ ವಾಹನದ ಹಿಂದೆ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ವಿವಿದ ಸಂಘ–ಸಂಸ್ಥೆಗಳ ಸದಸ್ಯರು, ಪಾನಕ, ಮಜ್ಜಿಗೆ, ಕೋಸಂಬರಿ, ತಂಪುಪಾನೀಯ ನೀಡಿ ಸಹಕರಿಸಿದರು.

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಮೀಪದಿಂದ ಬೆಳಿಗ್ಗೆ ಹೊರಟ ಉತ್ಸವ, ಸುಭಾಷ್‌ ವೃತ್ತಕ್ಕೆ ಬರುವ ವೇಳೆಗೆ ಮಧ್ಯಾಹ್ನ 3 ಗಂಟೆ ಆಗಿತ್ತು. ‌

ನವೋದಯ ಪರೀಕ್ಷೆ: ಡಿ.ಜೆ.ಸ್ಥಗಿತ

ಉತ್ಸವ ಸಾಗುವ ಮಾರ್ಗದ 2 ಶಾಲೆಗಳಲ್ಲಿ ನವೋದಯ ಪ್ರವೇಶ ಪರೀಕ್ಷೆ ನಡೆಯುತ್ತಿದ್ದರಿಂದ ಸಮಿತಿಯ ಸದಸ್ಯರು ಉತ್ಸವದ 3 ಡಿ.ಜೆ. ಬಂದ್‌ ಮಾಡಿಸಿ ಪರೀಕ್ಷಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಂಡರು.

ನಗರಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅಭಿಜಿತ್ ನೇತೃತ್ವದಲ್ಲಿ ನೂರಾರು ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪುರಸಭೆಯವರು ನಗರದ ಸ್ವಚ್ಛತೆ ಹಾಗೂ ಗಣಪತಿ ಪೆಂಡಾಲ್ ಸ್ವಚ್ಛತೆಗೆ ಆದ್ಯತೆ ನೀಡಿದ್ದರು.

ಹನುಮೋತ್ಸವಕ್ಕೆ ಸಂಸದ ಶ್ರೇಯಸ್‌ ₹ 2 ಲಕ್ಷ, ಶಾಸಕ ಎಚ್.ಡಿ.ರೇವಣ್ಣ ಅವರು 800 ಲೀಟರ್ ಹಾಲು ಹಾಗೂ 10 ಸಾವಿರ ನೀರಿನ ಪ್ಯಾಕೆಟ್ ನೀಡಿದ್ದಾರೆ. ಇನ್ನುಳಿದ ಖರ್ಚು–ವೆಚ್ಚಕ್ಕೆ ನಗರದ ಗಣ್ಯರು ಸಾರ್ವಜನಿಕರು ಸಹಕರಿಸಿದ್ದಾರೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

ಹನುಮೋತ್ಸವ ಸಾಗುವ ಮಾರ್ಗದ ಉದ್ದಕ್ಕೂ ಮಹಿಳೆಯರು ಪುರುಷರು ಯುವಕ– ಯುವತಿಯರು ನರ್ತಿಸಿ ಭಕ್ತಿ ಪ್ರದರ್ಶಿಸಿದರು

ಗಣಪತಿ ಪೆಂಡಾಲ್‌ನಲ್ಲಿ ಪ್ರಸಾದ ವ್ಯವಸ್ಥೆ

ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಗಣಪತಿ ಪೆಂಡಾಲ್‌ನಲ್ಲಿ ಟೊಮ್ಯಾಟೊ ಭಾತ್ ಮೊಸರನ್ನ ಜಿಲೇಬಿ ಮಜ್ಜಿಗೆ ನೀಡಲಾಯಿತು. ನಿರೀಕ್ಷೆಗಿಂತ ಹೆಚ್ಚು ಜನರು ಭಾಗವಹಿಸಿದ್ದು ಸಂಘಟಕರು 20 ಕ್ವಿಂಟಲ್‌ ಅಕ್ಕಿ ಹಾಕಿ ಪ್ರಸಾದದ ವ್ಯವಸ್ಥೆ ಮಾಡಿಸಿದ್ದರು. ಉತ್ಸವಕ್ಕೆ ಬಂದಷ್ಟೇ ಜನ ಉತ್ಸವ ನೋಡಲು ಬಂದಿದ್ದರಿಂದ ಪೇಟೆ ಕೋಟೆ ಮುಖ್ಯರಸ್ತೆ ಜನರಿಂದ ಕಿಕ್ಕಿರಿದು ತುಂಬಿದ್ದವು. ಸಮಿತಿಯ ಸದಸ್ಯರು ವಾಕಿಟಾಕಿ ಹಿಡಿದು ಉತ್ಸವ ಸುಗಮವಾಗಿ ಸಾಗಲು ಮಾರ್ಗದರ್ಶನ ನೀಡುತ್ತಿದ್ದರು. ಕುರುಹಿನ ಶೆಟ್ಟಿ ಮಹಿಳಾ ಸಮಾಜ ಆರ್ಯ ವೈಶ್ಯ ಮಹಿಳಾ ಸಮಾಜ ದೇವಾಂಗ ಮಹಿಳಾ ಸಮಾಜದ ಸದಸ್ಯರೂ ಸೇರಿದಂತೆ ಸಾವಿರಾರು ಮಹಿಳೆಯರು ಶಾಲಾ– ಕಾಲೇಜಿನ ವಿದ್ಯಾರ್ಥಿನಿಯರೂ ಭಕ್ತಪರವಶರಾಗಿ ಉತ್ಸವದ ಉದ್ದಕ್ಕೂ ನರ್ತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.