
ಬೇಲೂರು: ಇಲ್ಲಿನ ಲಕ್ಷ್ಮೀಪುರ ಬಡಾವಣೆಯ ವೀರಾಂಜನೇಯಸ್ವಾಮಿ ದೇಗುಲದ 12ನೇ ವಾರ್ಷಿಕೋತ್ಸವ, ಹನುಮ ಜಯಂತಿ ಹಾಗೂ ಶೋಭಾಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು.
ವೀರಾಂಜನೇಯಸ್ವಾಮಿ ದೇಗುಲದಲ್ಲಿ ಮಹಾ ಅಭಿಷೇಕ, ವಿಶೇಷ ಅಲಂಕಾರ, ಸಪರಿವಾರ ರಾಮತಾರಕ ಹವನ, ಪುರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಮಧ್ಯಾಹ್ನ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ವೀರಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಸೇಬು, ಡ್ರೈ ಪ್ರೂಟ್ಸ್ ಹಾಗೂ ಹಣದ ಹಾರವನ್ನು ಉತ್ಸವ ಮೂರ್ತಿಗೆ ಹಾಕಿ ಭಕ್ತಿಯನ್ನು ಮೆರೆದರು. ನೂರಾರು ಯುವಕರು, ಭಕ್ತರು ತಮ್ಮ ವಾಹನಗಳಿಗೆ ಹನುಮ ಧ್ವಜ ಅಳವಡಿಸಿಕೊಂಡಿದ್ದರು.
ಡಿ.ಜೆ. ಸದ್ದು, ವಿವಿಧ ವಾದ್ಯ, ಡೋಲುಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯಿಂದ ಬಂದಿದ್ದ 30 ಮಕ್ಕಳು ಭಜನೆಯೊಂದಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ಆಕರ್ಷಿಸಿದರು. ಮೆರವಣಿಗೆಯಲ್ಲಿ ಶ್ರೀರಾಮನ ಸ್ತಬ್ಧಚಿತ್ರದ ಗಮನ ಸೆಳೆಯಿತು. ಅಹಿತಕರ ಘಟನೆಗಳು ನಡೆಯದಂತೆ ಎಸ್ಪಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಟ್ಟಣದ ಹಲವಾರು ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ ಜರುಗಿದವು. ಹೋಳೆಬೀದಿಯ ಆಂಜನೇಯ ದೇಗುಲದ ಬಳಿ ದೇಗುಲದ ಟ್ರಸ್ಟ್ ಅಧ್ಯಕ್ಷ ಬಿ.ಗಿರೀಶ್ ನೇತೃತ್ವದಲ್ಲಿ ಭಕ್ತರಿಗೆ ಅನ್ನಸಂಪರ್ಪಣೆ ಮಾಡಲಾಯಿತು.
ವೀರಾಂಜನೇಯಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಮೋಹನ್ ಮಾತನಾಡಿ, ಭಕ್ತರ ಸಹಕಾರದಿಂದ ಹನುಮ ಜಯಂತಿ ಅದ್ದೂರಿಯಾಗಿ ನಡೆದಿದೆ ಎಂದರು.
ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಬೇಲೂರಿನ ಜನತೆ ಸಂಭ್ರಮದಿಂದ ಹನುಮ ಜಯಂತಿ ಆಚರಿಸುತ್ತಿದ್ದು, ಆಂಜನೇಯ ಕ್ಷೇತ್ರದ ಹಾಗೂ ನಾಡಿನ ಜನತೆಗೆ ಒಳಿತು ಮಾಡಲಿ ಎಂದರು.
ಮೆರವಣಿಗೆಯಲ್ಲಿ ಬಜರಂಗದಳದ ಸಕಲೇಶಪುರ ರಘು, ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್, ವೀರಶೈವ ಲಿಂಗಾಯತ ತಾಲ್ಲೂಕು ಘಟಕದ ಅಧ್ಯಕ್ಷ ಅಡಗೂರು ಬಸವರಾಜು, ನಿಕಟಪೂರ್ವ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ಉಪಾಧ್ಯಕ್ಷ ಕುಮಾರಸ್ವಾಮಿ (ಅರುಣ್), ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೌರಿ ಸಂಜಯ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಹನುಮ ಜಯಂತಿ ಸಮಿತಿಯ ಅನಂತರಾಜೇ ಅರಸು, ನಾಗೇಶ್ (ಗುಂಡ), ಮಂಜುನಾಥ್, ವಿಕಾಸ್ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.