
ಆಲೂರು: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲದಿನಗಳಿಂದ ನ್ಯೂನತೆಗಳು ಕಾಣುತ್ತಿದ್ದು, ಆಸ್ಪತ್ರೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲೆಯಲ್ಲೇ ವಿಶೇಷ ಗೌರವವಿದೆ. 20 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಆಸ್ಪತ್ರೆಯಲ್ಲಿ ಅಂದಿನ ಶಾಸಕರಾದ ಬಿ.ಬಿ.ಶಿವಪ್ಪ, ಎಚ್.ಎಂ.ವಿಶ್ವನಾಥ್, ಎಚ್.ಕೆ. ಕುಮಾರಸ್ವಾಮಿ ಮತ್ತು ಹಾಲಿ ಶಾಸಕ ಸಿಮೆಂಟ್ ಮಂಜು ಅವರ ಇಚ್ಛಾಶಕ್ತಿಯಿಂದ ಎಲ್ಲ ತಜ್ಞ ವೈದ್ಯರಿದ್ದು, ಸುಸಜ್ಜಿತ ಲ್ಯಾಬ್, ಡಯಾಲಿಸಿಸ್ ಸೇರಿದಂತೆ ಅನೇಕ ಸೌಲಭ್ಯಗಳಿವೆ.
ಆದರೆ ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೆಲ ಘಟನೆಗಳು ಸಂಭವಿಸುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡುತ್ತಿವೆ. ನ.4ರಂದು ಎದೆನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರು, ಸಂಬಂಧಿಕರೊಂದಿಗೆ ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬಂದು ಬಾಗಿಲು ತಟ್ಟಿದ್ದರೂ ಯಾರೂ ಬಾಗಿಲು ತೆರೆದಿರಲಿಲ್ಲ. ವಾಪಸ್ ಮನೆಗೆ ಹೋದ ಸ್ವಲ್ಪ ಸಮಯದ ನಂತರ ಮೃತಪಟ್ಟಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ದೊರಕಿದ್ದರೆ ಬದುಕುಳಿಯುತ್ತಿದ್ದರೇನೊ ಎಂದು ಕುಟುಂಬದವರು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನ. 5ರಂದು ಆಸ್ಪತ್ರೆ ಎದುರು ಸ್ಥಳೀಯ ಮುಖಂಡರು, ಹಲವು ಸಂಘಟನೆಗಳು ಸೇರಿದಂತೆ ಮೃತರ ಕುಟುಂಬದವರು, ಜನಸಾಮಾನ್ಯರು ಪ್ರತಿಭಟನೆ ನಡೆಸಿದರು. ಕರ್ತವ್ಯ ಲೋಪ ಎಸಗಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಶಾಸಕ ಸಿಮೆಂಟ್ ಮಂಜು, ‘ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಬಾಗಿಲು ತೆರೆಯದಿರಲು ಕಾರಣ ಏನು?, ಯಾವ ವೈದ್ಯರು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು? ಸಿಸಿಟಿವಿ ಕ್ಯಾಮೆರಾ ಸ್ಥಗಿತಗೊಂಡಿರುವುದರ ಬಗ್ಗೆ ಕೂಡಲೆ ತನಿಖೆ ನಡೆಸಿ ವರದಿ ನೀಡಬೇಕು. ಕರ್ತವ್ಯ ಲೋಪ ಎಸಗಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಾಗಿಲು ರೋಗಿಗಳಿಗೆ ಸದಾ ತೆರೆದಿರಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ತನಿಖಾ ತಂಡ ರಚಿಸಿ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು’ ಎಂದು ಹೇಳಿದರು.
ತುರ್ತು ಚಿಕಿತ್ಸೆಗಾಗಿ ಬಂದ ವ್ಯಕ್ತಿಗೆ ಆಸ್ಪತ್ರೆಯ ಬಾಗಿಲು ತೆರೆಯದಿರುವುದು. ಸಿಸಿಟಿವಿ ಕ್ಯಾಮೆರಾ ಸ್ಥಗಿತಗೊಂಡಿದ್ದರೂ ಸರಿಪಡಿಸದಿರುವುದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಅಹಿತಕರ ಘಟನೆಗಳು ಸಂಭವಿಸಿದರೆ ಸಿಸಿಟಿವಿ ಕ್ಯಾಮೆರಾ ಸಾಕ್ಷಿಯಾಗಿರುತ್ತದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
‘ಘಟನೆ ಬಗ್ಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದ್ದು, ತನಿಖೆಗೆ ತಂಡ ರಚಿಸಲಾಗಿದೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನಿಲ್ ತಿಳಿಸಿದ್ದಾರೆ.
ಘಟನೆ ಬಗ್ಗೆ ವಿಷಾದವಿದೆ. ಅಗತ್ಯ ಇರುವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಮೊಬೈಲ್‍ಫೋನ್‌ಗೆಗೆ ಸಂಪರ್ಕ ತೆಗೆದುಕೊಳ್ಳುತ್ತೇನೆ. ಕೂಡಲೇ ಸಭೆ ನಡೆಸಿ ವೈದ್ಯರು ಮತ್ತು ಸಿಬ್ಬಂದಿಗೆ ಸೂಚನೆ ನೀಡುತ್ತೇನೆ.– ಡಾ. ಕಿಶೋರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ನನ್ನ ಸಹೋದರ ರಾತ್ರಿ 12 ಗಂಟೆಗೆ ಆಸ್ಪತ್ರೆಗೆ ಬಾಗಿಲು ತಟ್ಟಿದ್ದಾನೆ. ಬಾಗಿಲು ತೆರೆಯದಿದ್ದಾಗ ಮನೆಗೆ ಬಂದು ಶೌಚಾಲಯಕ್ಕೆ ತೆರಳಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕು.– ಸಿರಾಜ್ ಶರೀಫ್, ಮೃತರ ಸಹೋದರ