ಹಾಸನ: ವರ್ಷಕ್ಕೆ 60 ಕ್ಕೂ ಹೆಚ್ಚು ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಹಾಸನ ರೆಡ್ ಕ್ರಾಸ್ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಅಧ್ಯಕ್ಷೆ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಾಸನ ರೆಡ್ ಕ್ರಾಸ್ 2024ರ ಏಪ್ರಿಲ್‍ನಿಂದ 2025ರ ಮಾರ್ಚ್‌ವರೆಗೆ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿದೆ. ನಾನು ಸಾಕಷ್ಟು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ರೆಡ್ ಕ್ರಾಸ್ ಘಟಕ ಇಷ್ಟೊಂದು ಕ್ರಿಯಾಶೀಲವಾಗಿ ಇರುವುದನ್ನು ನೋಡಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತದಿಂದ ಪ್ರತಿ ತಿಂಗಳು ಎರಡು ಬಾರಿ ರಸ್ತೆ ಸುರಕ್ಷತಾ ಕಾರ್ಯಕ್ರಮ ಮಾಡುತ್ತೇವೆ. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಪದಾಧಿಕಾರಿಗಳು ನೀಡಿದ ಸಲಹೆಗಳು ನಮಗೆ ನೆರವಾಗಿವೆ. ಶಾಲಾ- ಕಾಲೇಜುಗಳಲ್ಲಿ ರಕ್ತದಾನದ ಅರಿವು ಮೂಡಿಸುವುದು, ಅಪಘಾತ ತಡೆಗಟ್ಟುವಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉತ್ತಮ ಸಲಹೆ ನೀಡಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಸಮಾಜದಲ್ಲಿ ಸೇವಾ ಮನೋಭಾವ ಕಡಿಮೆ ಆಗುತ್ತಿದ್ದು, ಅದನ್ನು ಹೆಚ್ಚಿಸುವ ಕೆಲಸವನ್ನು ರೆಡ್‌ಕ್ರಾಸ್ ಮಾಡುತ್ತಿದೆ. ಸಮಾಜಮುಖಿ ಕೆಲಸ ಮಾಡುವ ಮನೋಭಾವ ಯುವ ಸಮುದಾಯದಲ್ಲಿ ಬರಬೇಕು ಎಂದರು.
ರೆಡ್‌ಕ್ರಾಸ್ ಸಂಸ್ಥೆಯು ಮಕ್ಕಳಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ. ಇಂತಹ ಸಮಾಜಮುಖಿ ಕಾರ್ಯಗಳು ಸಮಾಜದ ಉನ್ನತಿಗೆ ಸಹಕಾರಿಯಾಗಿದೆ ಎಂದರು.
ರೆಡ್ ಕ್ರಾಸ್ ಸಭಾಪತಿ ಎಚ್.ಪಿ. ಮೋಹನ್, ನಿರ್ದೇಶಕರಾದ ಎಸ್.ಎಸ್. ಪಾಷಾ, ಅಮ್ಜದ್ ಖಾನ್, ಬಿ.ಆರ್. ಉದಯಕುಮಾರ್, ಕೆ.ಟಿ.ಜಯಶ್ರೀ, ಡಾ.ಎ.ಸಾವಿತ್ರಿ, ಡಾ.ಭಾರತೀ ರಾಜಶೇಖರ್, ಡಾ.ರಂಗಲಕ್ಷ್ಮಿ, ಡಾ.ಅಬ್ದುಲ್ ಬಷೀರ್, ಕುಮಾರ್ ಇತರರಿದ್ದರು.
ರೆಡ್ ಕ್ರಾಸ್ ಕ್ರಿಯಾಶೀಲವಾಗಿರಲು ಇಲ್ಲಿನ ಪ್ರತಿ ಸದಸ್ಯರ ಕೊಡುಗೆ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಒಳ್ಳೆಯ ಕೆಲಸ ಮುಂದುವರಿಯಲಿ.-ಕೆ.ಎಸ್.ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.