ADVERTISEMENT

ಹಾಸನ: ಗರಿಗೆದರಿದ ‘ಕೊಬ್ಬರಿ’ ರಾಜಕೀಯ

ಬೆಳೆಗಾರರ ಗಮನ ಸೆಳೆಯಲು ಕಾಂಗ್ರೆಸ್–ಜೆಡಿಎಸ್‌ ನಾಯಕರ ಪೈಪೋಟಿ

ಚಿದಂಬರ ಪ್ರಸಾದ್
Published 23 ಡಿಸೆಂಬರ್ 2023, 5:49 IST
Last Updated 23 ಡಿಸೆಂಬರ್ 2023, 5:49 IST
ಕೃಷಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಅವರಿಗೆ ಮನವಿ ಸಲ್ಲಿಸಿದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಅವರಿಗೆ ಮನವಿ ಸಲ್ಲಿಸಿದರು.   

ಹಾಸನತೆಂಗು, ಜಿಲ್ಲೆಯ ಮುಖ್ಯ ವಾಣಿಜ್ಯ ಕೃಷಿ ಬೆಳೆಯು, ಈಗ ರಾಜಕೀಯ ಆಯುಧವಾಗಿ ಬಳಕೆಯಾಗುತ್ತಿದೆ.ಲೋಕಸಭೆ ಚುನಾವಣೆಯಲ್ಲಿ ಬೆಳೆಗಾರರ ಮತಗಳನ್ನು ಸೆಳೆಯುವಲ್ಲಿ ರಾಜಕೀಯ ಪಕ್ಷಗಳು ಹೆಚ್ಚು ಮುತುವರ್ಜಿ ತೋರುತ್ತಿವೆ. ಇದರ ಫಲವಾಗಿ ಜಿಲ್ಲೆಯ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು, ತೆಂಗು ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪೈಪೋಟಿ ಆರಂಭಿಸಿದ್ದಾರೆ.

ದೇಶದಲ್ಲಿ ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಹಾಸನ, ತುಮಕೂರು, ಮಂಡ್ಯ ಜಿಲ್ಲೆಗಳ 5.61ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಹಾಸನ ಜಿಲ್ಲೆಯೊಂದರಲ್ಲೇ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹಾಗಾಗಿ ತುಮಕೂರು, ಹಾಸನ, ಮಂಡ್ಯ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ ನಾಯಕರು, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೊಬ್ಬರಿ ಬೆಳೆಗಾರರ ಹಿತಾಸಕ್ತಿ ಕಾಪಾಡಬೇಕು. ವಿಶೇಷ ಪ್ಯಾಕೇಜ್‌ ನೀಡಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.

ಇದರ ಬೆನ್ನಲ್ಲೆ ಕಾಂಗ್ರೆಸ್‌ ನಾಯಕರೂ ನವದೆಹಲಿಗೆ ತೆರಳಿದ್ದು, ಕೃಷಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಅವರನ್ನು ಭೇಟಿ ಮಾಡಿದ್ದಾರೆ. ಹಾಸನ ಜಿಲ್ಲೆಯವರೇ ಆದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದುದು ವಿಶೇಷ.

ADVERTISEMENT

ಒಂದೆಡೆ ಜೆಡಿಎಸ್‌ನಿಂದ ತೆಂಗು ಬೆಳೆಗಾರರ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಾಂಗ್ರೆಸ್‌ ನಾಯಕರು, ದೆಹಲಿಗೆ ದೌಡಾಯಿಸಿದ್ದು, ಕೃಷಿ ಸಚಿವರನ್ನು ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ ಮುಖಂಡರು ರಾಜ್ಯದವರೇ ಆದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದರೆ, ಕಾಂಗ್ರೆಸ್‌ ನಾಯಕರು, ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಅವರನ್ನೇ ನೇರವಾಗಿ ಸಂಪರ್ಕಿಸಿದ್ದಾರೆ.

ಮತ ಬುಟ್ಟಿಯ ಮೇಲೆ ಕಣ್ಣು: ಕೊಬ್ಬರಿಗೆ ಬೆಲೆ ಇಲ್ಲದೇ ಬೆಳೆಗಾರರು ಕಂಗೆಟ್ಟಿದ್ದಾರೆ. ಸದ್ಯ ಅರಸೀಕೆರೆ ಹಾಗೂ ತಿಪಟೂರಿನ ಕೊಬ್ಬರಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹8 ಸಾವಿರ ದರ ಸಿಗುತ್ತಿದೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಈ ಹಿಂದೆ ನಾಫೆಡ್‌ ಮೂಲಕ ಕೊಬ್ಬರಿ ಖರೀದಿಸಿದಾಗ, ಕ್ವಿಂಟಲ್‌ಗೆ ₹ 11,750 ದರ ಸಿಕ್ಕಿತ್ತು. ಇದೀಗ ₹3 ಸಾವಿರ ಕಡಿಮೆ ದರ ಸಿಗುತ್ತಿದ್ದು, ತೆಂಗು ಬೆಳೆಗಾರರು ದಿಕ್ಕು ತೋಚದಂತಾಗಿದೆ. ಇದೇ ಅವಕಾಶವನ್ನು ಬಳಸಿಕೊಂಡು, ತೆಂಗು ಬೆಳೆಗಾರರ ನೆರವಿಗೆ ಧಾವಿಸಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಣತಂತ್ರ ರೂಪಿಸುತ್ತಿದೆ. ಹಾಗಾಗಿ ತೆಂಗು ಬೆಳೆಗಾರರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಇದು ಸುಲಭ ಸಾಧ್ಯವಾಗಲಿದೆ ಎನ್ನುವ ಮಾತುಗಳನ್ನು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಕೊಬ್ಬರಿ ಬೆಲೆ ಕುಸಿತ ಕಂಡಿದ್ದು ರೈತರು ಸಂಕಷ್ಟಕ್ಕೀಡಾಗಿದ್ಧಾರೆ. ಕೇಂದ್ರ ಸರ್ಕಾರ ನಾಫೆಡ್‌ ಮೂಲಕ ಮಾರುಕಟ್ಟೆಯಿಂದ ನೇರವಾಗಿ ಕೊಬ್ಬರಿ ಖರೀದಿಸಬೇಕು. ಈ ಪ್ರಕ್ರಿಯೆ ತಕ್ಷಣ ಆರಂಭ ಆಗಬೇಕು.

-ಕೆ.ಎಂ. ಶಿವಲಿಂಗೇಗೌಡ ಶಾಸಕ

ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಬೇಕು. ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ ₹ 15ಸಾವಿರ ಬೆಂಬಲ ಬೆಲೆ ಮರು ನಿಗದಿಪಡಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ.

-ಎಚ್‌.ಡಿ. ರೇವಣ್ಣ ಶಾಸಕ

ಚುನಾವಣೆಯಲ್ಲಿ ಪ್ರಮುಖ ಅಸ್ತ್ರ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೆಂಗು ಬೆಳೆಗಾರರ ಸಮಸ್ಯೆಗಳು ಪ್ರಮುಖ ಅಸ್ತ್ರಗಳಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಬಹುತೇಕ ಕೃಷಿಕರು ತೆಂಗು ಅಡಿಕೆ ಬೆಳೆಯುತ್ತಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷಗಳತ್ತ ಒಲವು ತೋರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್‌ ‘ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುತ್ತಿದೆ. ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರು ನೀಡಿದ್ದ ಭರವಸೆಯಂತೆ ಕೊಬ್ಬರಿಗೆ ₹15 ಸಾವಿರ ಬೆಂಬಲ ಬೆಲೆ ನಿಗದಿಪಡಿಸಲಿ’ ಎಂದು ಆಗ್ರಹಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್‌ ಕೂಡ ತಿರುಗೇಟು ನೀಡುತ್ತಿದ್ದು ‘ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಬೇಕು’ ಎನ್ನುವ ಒತ್ತಾಯ ಮಾಡುತ್ತಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಇದೀಗ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಮೂಲಕ ಮತಬುಟ್ಟಿ ಗಟ್ಟಿ ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.