ADVERTISEMENT

ಆಲೂರು | ಕಾಡು ಪ್ರಾಣಿ ಹಾವಳಿ: ತತ್ತರಿಸಿದ ಜನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 7:46 IST
Last Updated 27 ಡಿಸೆಂಬರ್ 2023, 7:46 IST
ಕಾಣಿಗೆರೆ ಗ್ರಾಮದಲ್ಲಿ ಚಿರತೆ ಕರುವನ್ನು ಕೊಂದು ಹಾಕಿರುವುದು. 
ಕಾಣಿಗೆರೆ ಗ್ರಾಮದಲ್ಲಿ ಚಿರತೆ ಕರುವನ್ನು ಕೊಂದು ಹಾಕಿರುವುದು.    

ಆಲೂರು: ಕಸಬಾ ಹೋಬಳಿ ಹೊರತುಪಡಿಸಿದರೆ ಕುಂದೂರು, ಕೆ. ಹೊಸಕೋಟೆ ಮತ್ತು ಪಾಳ್ಯ ಹೋಬಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.

ಯಾವ ಗಳಿಗೆಯಲ್ಲಿ ಕಾಡು ಪ್ರಾಣಿಗಳು ಮೈಮೇಲೆ ಬೀಳುತ್ತವೆಯೊ ಎಂಬ ಭಯದಲ್ಲಿ ಜನರು ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ. ನಾಲ್ಕು ದಶಕಗಳಿಂದ ಕೆ. ಹೊಸಕೋಟೆ, ಪಾಳ್ಯ ಹೋಬಳಿ ವ್ಯಾಪ್ತಿಗೊಳಪಡುವ ಜನರು ಕಾಡಾನೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

 ಕಳೆದ ವರ್ಷ ಕುಂದೂರು ಹೋಬಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಈಗ ಒಂದು ತಿಂಗಳಿನಿಂದ ಕೆ. ಹೊಸಕೋಟೆ ಹೋಬಳಿಯಲ್ಲಿ ಪ್ರತ್ಯಕ್ಷವಾಗಿದೆ. ಚಿರತೆ ಸಾಮಾನ್ಯವಾಗಿ ಕರುಗಳು, ಮಕ್ಕಳ ಮೇಲೆ ಎರಗುತ್ತದೆ.

ADVERTISEMENT

ಕಾಣಿಗೆರೆ ಗ್ರಾಮದ ಸುನಿಲ್ ತಮ್ಮ ಕಾಫಿ ತೋಟದೊಳಗೆ ಮನೆ ನಿರ್ಮಾಣ ಮಾಡಿ ವಾಸವಿದ್ದು, 400 ಅಡಿ ದೂರದಲ್ಲಿ ದನದ ಕೊಟ್ಟಿಗೆ ಇದೆ. ಎಂದಿನಂತೆ ಮಂಗಳವಾರ ಬೆಳಿಗ್ಗೆ ಇವರು ಬೆಳಗ್ಗೆ 6ಕ್ಕೆ ಕೊಟ್ಟಿಗೆ ಬಳಿ ಹೋದಾಗ ಕರು ಹೊರಗೆ ಸತ್ತು ಬಿದ್ದಿತ್ತು.

ಮುಂದೆ ನೋಡಿದಾಗ ಸುಮಾರು 30 ಅಡಿ ದೂರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇವರನ್ನು ನೋಡಿದ ಚಿರತೆ ಬಾಯಿ ತೆಗೆದು ಗುಟುರು ಹಾಕಿದಾಗ, ಇವರು ಕೊಟ್ಟಿಗೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇವರು ಚಿರತೆಯನ್ನು ಗಮನಿಸದಿದ್ದರೆ ದಾಳಿ ಮಾಡುವ ಸಂಭವ ಹೆಚ್ಚಾಗಿತ್ತು. ವಿಷಯ ತಿಳಿದ ತಕ್ಷಣ ವಲಯ ಅರಣ್ಯಧಿಕಾರಿ ಬಿ. ಜಿ. ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಹಿಡಿಯಲು ಬೋನು ಇರಿಸಿದ್ದಾರೆ.

‘ನಾಲ್ಕು ದಶಕಗಳಿಂದ ಕಾಡಾನೆ ಹಾವಳಿಗೊಳಗಾಗಿದ್ದೇವೆ. ಈಗ ಚಿರತೆ ಮತ್ತು ಹಂದಿಗಳ ಹಾವಳಿ ಪ್ರಾರಂಭವಾಗಿದೆ. ಒಂದು ತಿಂಗಳಿನಿಂದ ಚಿರತೆ ಓಡಾಡುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈಗ ಕರುವನ್ನು ಕೊಂದು ತಿಂದಿದೆ. ಕಾಡಾನೆಗಳು ಇರುವುದನ್ನು ಗಮನಿಸಬಹುದು. ಆದರೆ ಚಿರತೆ ಇರುವುದನ್ನು ಗಮನಿಸಲು ಅಸಾಧ್ಯ. ಅದು ಎಲ್ಲಿ ಯಾವಾಗ ಮೈಮೇಲೆ ಎರಗುತ್ತದೆ ಎಂಬುದು ತಿಳಿಯದಾಗಿದೆ’ ಎನ್ನುತ್ತಾರೆ ಸ್ಥಳೀಯರು.

‘ಸರ್ಕಾರದ ಕೆಲ ಯೋಜನೆಗಳಿಂದ ಕಾಡು ನಾಶವಾಗುತ್ತಿದೆ. ಸುಮ್ಮನೆ ಅರಣ್ಯ ಇಲಾಖೆಯವರನ್ನು ದೂರಿದರೆ ಪ್ರಯೋಜನವಿಲ್ಲ. ಅವರೂ ನಮ್ಮಂತೆ ಮನುಷ್ಯರು. ಸಧ್ಯದಲ್ಲೆ ಮುಂದಿನ ದಿನಗಳಲ್ಲಿ ಎಲ್ಲ ಕಾಡು ಪ್ರಾಣಿಗಳು ಆಹಾರ ಕೊರತೆಯಿಂದ ಊರೊಳಗೆ ಪ್ರವೇಶ ಮಾಡುತ್ತವೆ. ಇನ್ನೆಷ್ಟು ಜನ, ದನ, ಕರುಗಳು ಕಾಡು ಪ್ರಾಣಿಗಳಿಗೆ ಬಲಿಯಾಗಬೇಕೊ’ ಎನ್ನುತ್ತಾರೆ ಕಾಣಿಗೆರೆ ಗ್ರಾಮದ ಗಂಗರಾಜು.

ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಬೋನು ಅಳವಡಿಸಿರುವುದು. 

‘ಜನಸಾಮಾನ್ಯರು ಬೆಳಿಗ್ಗೆ ಸಂಜೆ ವೇಳೆ ಮಕ್ಕಳನ್ನು ಸಾಧ್ಯವಾದಷ್ಟು ಹೊರಗೆ ಬಿಡಬಾರದು. ಕಾಡು ಪ್ರಾಣಿಗಳ ಹಾವಳಿ ತಡೆಯಲು ಸಾಕಷ್ಟು ಕ್ರಮ ವಹಿಸಲಾಗಿದೆ. ಈಗಾಗಲೇ ಜನರ ಗಮನ ಸೆಳೆಯಲು ಪ್ರಚಾರ ಮಾಡಲಾಗುತ್ತಿದೆ’ಎಂದು ವಲಯ ಅರಣ್ಯಧಿಕಾರಿ ಬಿ. ಜಿ. ಜಗದೀಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.