ಹಾಸನ: ರಾಜಕೀಯ ಮೇಲಾಟಗಳು ಜಿಲ್ಲೆಯ ಅಭಿವೃದ್ಧಿಯಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿವೆ. ಹಾಸನ–ಮಾರನಹಳ್ಳಿ ಹೆದ್ದಾರಿ ಕಾಮಗಾರಿ, ಹಾಸನದ ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಕುಂಟುತ್ತಲೇ ಸಾಗಿದ್ದು, ಈ ಕಾಮಗಾರಿಗಳು ಮುಗಿದು ಸುಗಮವಾಗಿ ಸಂಚರಿಸುವುದು ಯಾವಾಗ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.
ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ನನೆಗುದಿಗೆ ಬಿದ್ದಿದೆ. ಬಾಕಿ ಅನುದಾನ ಬಿಡುಗಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಜಟಾಪಟಿ ನಡೆಯುತ್ತಿದ್ದು, ನಗರದ ಜನರ ಬವಣೆ ನೀಗದಂತಾಗಿದೆ.
ಹಾಸನದ ನೂತನ ಬಸ್ ನಿಲ್ದಾಣದಿಂದ ಎನ್.ಆರ್.ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವರ್ಷದ ಹಿಂದೆಯೇ ಮುಗಿದು ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾಗಿತ್ತು. ಆದರೆ, ಒಂದು ಬದಿಯ ಕಾಮಗಾರಿ ಮಾತ್ರ ಮುಗಿದಿದ್ದು, ಅನುದಾನದ ಕೊರತೆಯಿಂದ ಇನ್ನೊಂದು ಬದಿಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದೊಂದು ಸ್ಮಾರಕದಂತೆ ಕಾಣುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 60:40 ಅನುಪಾತದ ಅನುದಾನದಲ್ಲಿ ₹42 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಗರದಲ್ಲಿ ನಡೆಯುತ್ತಿದೆ. ಆದರೆ, ಈ ಕಾಮಗಾರಿ ಮೊತ್ತ ಈಗ ₹100 ಕೋಟಿಗೂ ಅಧಿಕವಾಗಿದೆ. ಈಗಾಗಲೇ ಒಂದು ಬದಿ ಕಾಮಗಾರಿ ಪೂರ್ಣಗೊಳಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಇನ್ನೊಂದು ಬದಿಯ ಕಾಮಗಾರಿ ಪೂರ್ಣಗೊಳಿಸಲು ₹48 ಕೋಟಿ ಅಗತ್ಯವಿದೆ. ಈ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಆದರೆ, ಅನುದಾನ ಬಿಡುಗಡೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ ಎನ್ನುವುದು ಜೆಡಿಎಸ್ ಮುಖಂಡರ ಆರೋಪ.
‘ಸದ್ಯಕ್ಕೆ ಅನುದಾನ ಸಿಗದೇ ಒಂದು ಬದಿಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ರೈಲ್ವೆ ಸಚಿವರಿಗೂ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಾಸಕ ಸ್ವರೂಪ್ ತಿಳಿಸಿದ್ದಾರೆ.
2019ರಲ್ಲಿ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, 6 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣವಾಗುತ್ತಿಲ್ಲ. ಇಬ್ಬರು ಸಂಸದರು, ಇಬ್ಬರು ಶಾಸಕರು ಆಯ್ಕೆಯಾದರೂ ಇನ್ನೂ ನಿತ್ಯ ಪರದಾಡುವುದು ತಪ್ಪುತ್ತಿಲ್ಲ ಎನ್ನುವುದು ನಗರದ ಜನರ ಬೇಸರ.
ಹೊಳೆನರಸೀಪುರದ ಪ್ರೀತಿ ಹಾಸನಕ್ಕಿಲ್ಲ
ರಾಜ್ಯ ಸರ್ಕಾರಕ್ಕೆ ಹೊಳೆನರಸೀಪುರದ ಮೇಲಿರುವ ಪ್ರೀತಿ ಹಾಸನದ ಮೇಲೆ ಇದ್ದಂತೆ ಕಾಣುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ 1/600-700 ರಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ3ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ.83.72 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರದ ಪಾಲಿನ ಪರಿಷ್ಕೃತ ಮೊತ್ತ ₹49.54 ಕೋಟಿಗಳಲ್ಲಿ ಈಗಾಗಲೇ ಭರಿಸಿರುವ ₹27.70 ಕೋಟಿ ಹೊರತುಪಡಿಸಿ ಬಾಕಿ ಇರುವ ₹21.84 ಕೋಟಿಯನ್ನು ಲೋಕೋಪಯೋಗಿ ಇಲಾಖೆಯಿಂದ ಭರಿಸಲು ಅನುಮೋದಿಸಿದೆ. ಆದರೆ ಹಾಸನ ನಗರದಲ್ಲಿ ಅರ್ಧಕ್ಕೆ ನಿಂತಿರುವ ಮೇಲ್ಸೇತುವೆ ಕಾಮಗಾರಿಗೆ ಹಣ ನೀಡಲು ಏಕೆ ಮೀನಮೇಷ ಎಣಿಸುತ್ತಿದೆ ಎಂದು ಜನರ ಪ್ರಶ್ನಿಸುತ್ತಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ. ಹಾಸನದ ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಲು ಮುಂದಾಗುತ್ತಿಲ್ಲ. ಈ ಬಜೆಟ್‌ನಲ್ಲಾದರೂ ಹಣ ನೀಡಲಿ.ಹೊಂಗೆರೆ ರಘು, ಜೆಡಿಎಸ್ ಜಿಲ್ಲಾ ವಕ್ತಾರ
ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ₹79 ಕೋಟಿ ಅಗತ್ಯವಿದ್ದು ಶೇ 50ರಷ್ಟು ಹಣ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಶ್ರೇಯಸ್ ಪಟೇಲ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.