ADVERTISEMENT

ಕನ್ನಡ ಅನುಷ್ಠಾನದಲ್ಲಿ ಹಾಸನ ಮುಂದು: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:58 IST
Last Updated 14 ಮೇ 2025, 15:58 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.    

ಹಾಸನ: ‘ಹಾಸನ ಕನ್ನಡಿಗರ ಜೀವ ಕೇಂದ್ರ, ಹೊಯ್ಸಳರು ಆಳ್ವಿಕೆಯ ನಾಡಾಗಿದ್ದು, ಕನ್ನಡ ಅನುಷ್ಠಾನದಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾಸನವೂ ಐತಿಹಾಸಿಕ ಹಿನ್ನೆಲೆಯುಳ್ಳ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಸ್ಥಳಗಳು ಹೊಂದಿದ್ದು ಕನ್ನಡ ಭಾಷೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ’ ಎಂದರು.

‘ಹಲವು ವರ್ಷಗಳಿಂದ ಕನ್ನಡ ಅನುಷ್ಠಾನ ಪರಿಶೀಲನೆಗೋಸ್ಕರ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇವೆ. ಈಗಾಗಲೇ ರಾಜ್ಯದ 9 ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕನ್ನಡ ಅಭಿವೃದ್ಧಿ ಅನುಷ್ಠಾನ ಕುರಿತು ಪರಿಶೀಲಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ಯಾವುದೇ ಭಾಷೆಯಾಗಲಿ, ಅದು ಎಷ್ಟೇ ಶ್ರೇಷ್ಠ ಭಾಷೆಯಾಗಿದ್ದರೂ ಆ ಭಾಷೆ ಬಳಕೆಯಾಗದೆ ಹೋದರೆ ಉಳಿಯುವುದಿಲ್ಲ. ಹಾಗಾಗಿ ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ನಾವು ಬಳಸಬೇಕು .ಜಿಲ್ಲೆಯಲ್ಲಿ ಅಧಿಕಾರಿಗಳು ಕೊಟ್ಟ ವರದಿಯ ಮೇರೆಗೆ ಕನ್ನಡ ಅನುಷ್ಠಾನ ಎಲ್ಲೆಡೆ ಯಶಸ್ವಿಯಾಗಿದೆ. ಒಂದು ವೇಳೆ ಎಲ್ಲಿಯಾದರೂ ಅನುಷ್ಠಾನವಾಗಿಲ್ಲವೆಂದರೆ ಅದನ್ನು ಗಮನಿಸಿ ಅನುಷ್ಠಾನ ಮಾಡಲು ಕ್ರಮ ವಹಿಸಲು ಸೂಚಿಸಲಾಗಿದೆ. ನಾಮಫಲಕಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಗ್ರಾಮಗಳ ಹೆಸರನ್ನು ಹಾಕುವುದರ ಮೂಲಕ ಸುಮಾರು 71 ಸಾವಿರ ಕನ್ನಡ ಪದಗಳು ಉಳಿಯುತ್ತವೆ ಹಾಗೂ ಬಳಕೆ ಮಾಡಿದಂತೆ ಆಗುತ್ತದೆ’ ಎಂದು ಹೇಳಿದರು.

‘ಹಾಸನ ಮಹಾನಗರ ಪಾಲಿಕೆ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯ ಹೆಸರುಗಳು ಅಳಿದು ಹೋಗಬಾರದು. ಕನ್ನಡದ ಹೆಸರುಗಳು ಇರುವಂತೆ ಎಚ್ಚರ ವಹಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಬೇರೆ ಭಾಷೆಯ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ಕುರಿತು ರಾಜ್ಯದಲ್ಲಿ ನಡೆಸುವ ಭಾಷಾ ಪರೀಕ್ಷೆಯ ಪಠ್ಯಕ್ರಮದ ಕುರಿತು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವರದಿಯನ್ನು ನೀಡಲು ತಿಳಿಸಿದ್ದೇವೆ ಎಂದರು.

‘ಸರ್ಕಾರದಿಂದ 1800ಕ್ಕೂ ಹೆಚ್ಚು ಆದೇಶಗಳನ್ನು ಕನ್ನಡ ಪರವಾಗಿ ಹೊರಡಿಸಿದೆ. ಅಧಿಕಾರಿಗಳು ಕನ್ನಡವನ್ನು ಪ್ರೀತಿಸಿ ಆದೇಶಗಳು ಜಾರಿಗೆ ಬರುವಂತೆ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಕಲಿಯದ ಇತರ ಭಾಷಿಕರು ಕನ್ನಡವನ್ನು ಕಲಿಯುವ ಆಸಕ್ತಿ ತೋರಿಸಿದರೆ ಕನ್ನಡ ಕಲಿಕಾ ಕೇಂದ್ರವನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.

‘ರಾಜ್ಯದಲ್ಲಿ ಅನ್ಯ ಭಾಷಿಕರು ಕನ್ನಡವನ್ನು ಕಲಿಯಲು ಅನುಕೂಲವಾಗಲು 100 ಕನ್ನಡ ಕಲಿಕಾ ಕೇಂದ್ರಗಳನ್ನ ಆರಂಭಿಸಬೇಕೆಂಬುದು ಪ್ರಾಧಿಕಾರದ ಉದ್ದೇಶವಾಗಿದೆ. 100ಕ್ಕಿಂತ ಹೆಚ್ಚು ಕೇಂದ್ರಗಳು ಆದರೂ ಸಹ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಕನ್ನಡ ಭವನ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಭವನ ನಿರ್ಮಾಣ ಪ್ರಯತ್ನ ಮಾಡುತ್ತೇವೆ ಸಚಿವರು ಹಾಗೂ ಅಧಿಕಾರಿಗಳ ಮುಂದೆ ಈ ಬೇಡಿಕೆಯನ್ನು ಇಡುತ್ತೇವೆ’ ಎಂದು ತಿಳಿಸಿದರು.

‘ಹಿಂದಿನ ಕಾಲದಲ್ಲಿ ಅನೇಕರು ಶಾಲೆಗಳ ನಿರ್ಮಿಸುವುದ ಕ್ಕಾಗಿಯೆ ಜಮೀನನ್ನು ದಾನ ನೀಡಿದ್ದಾರೆ. ಆ ಶಾಲೆಯ ಜಾಗವನ್ನು ಕೆಲವರು ದಾಖಲಾತಿಗಳನ್ನು ತಂದು ವಶಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ  ಹಕ್ಕುಪತ್ರವನ್ನು ನೀಡುವಂತಹ ಕ್ರಮ ಆಗಬೇಕು.ಸರ್ಕಾರ ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇ 60ರಷ್ಟು ಕಡ್ಡಾಯವಾಗಿ ಕನ್ನಡ ಇರಬೇಕು ಎಂದು ಆದೇಶ ಹೊರಡಿಸಿರುವುದು ಆಶಾದಾಯಕ ಬೆಳವನಿಗೆ ಎಂದ ಅವರು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚುಗಾರರಿಗೆ ಕನ್ನಡ ಪದಗಳನ್ನು ಸರಿಯಾಗಿ ಜೋಡಿಸಲು ಬರುವುದಿಲ್ಲ ಎನ್ನುವಂತಹ ಸಮಸ್ಯೆಗಳು ಕೇಳಿ ಬರುತ್ತಿವೆ ಆ ಸಮಸ್ಯೆ ಯನ್ನು ಬಗೆಹರಿಸಲು ಕ್ರಮ ವಹಿಸುತ್ತೇವೆ’ ಎಂದರು. 

ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಎಸ್ಪಿ ಮೊಹಮ್ಮದ್ ಸುಜೀತಾ ಉಪಸ್ಥಿತರಿದ್ದರು.

ಕನ್ನಡದಲ್ಲಿ ಅನುತ್ತೀರ್ಣ: ಬೇಸರ

‘ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಸುಮಾರು 132000 ಪಿ.ಯು.ಸಿಯಲ್ಲಿ ಸುಮಾರು 60 ರಿಂದ 62 ಸಾವಿರ ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗಿರುವುದು ಬೇಸರದ ಸಂಗತಿಯಾಗಿದೆ. ಇಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಕಾರಣಗಳೇನೆಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದೇನೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.