ADVERTISEMENT

ಹಾಸನ: ಅಭಿವೃದ್ಧಿ ನಿರೀಕ್ಷೆಯಲ್ಲಿ ಬಡಾವಣೆ

ಗುಂಡಿ ಬಿದ್ದ ರಸ್ತೆ, ತುಂಬಿದ ಚರಂಡಿ: ಅಧಿಕಾರಿಗಳು, ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 7:08 IST
Last Updated 2 ಜುಲೈ 2025, 7:08 IST
ಹಾಸನ ಹೊರವಲಯದ ಬಿ.ಕಾಟೀಹಳ್ಳಿಯ ರಸ್ತೆಯ ದುಸ್ಥಿತಿ.
ಹಾಸನ ಹೊರವಲಯದ ಬಿ.ಕಾಟೀಹಳ್ಳಿಯ ರಸ್ತೆಯ ದುಸ್ಥಿತಿ.   

ಹಾಸನ: ನಗರಸಭೆಯಾಗಿದ್ದ ಹಾಸನ ಇದೀಗ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದೆ. ಇದಕ್ಕಾಗಿ ಸುತ್ತಲಿನ ಗ್ರಾಮಗಳನ್ನು ಪಾಲಿಕೆಯ ವ್ಯಾಪ್ತಿಗೆ ಸೇರಿಸಲಾಗಿದ್ದು, ಅಭಿವೃದ್ಧಿ ಇಲ್ಲದ ಈ ಗ್ರಾಮಗಳ ಬಡಾವಣೆಗಳ ಜನರು ಪರಿತಪಿಸುವಂತಾಗಿದೆ.

ನಗರಪಾಲಿಕೆ ವ್ಯಾಪ್ತಿಗೆ ಬರುವ ಬಿ.ಕಾಟೀಹಳ್ಳಿಯ ಬಡಾವಣೆಗಳ ಜನರಿಗೆ ಅನಾರೋಗ್ಯ ಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಡಾವಣೆಗಳಲ್ಲಿ ಬಹುತೇಕ ವಿವಿಧ ಇಲಾಖೆಗಳ ಅಧಿಕಾರಿ ನೌಕರರು, ಆರೋಗ್ಯ ಅಧಿಕಾರಿಗಳು, ವೈದ್ಯರು ವಾಸವಾಗಿದ್ದಾರೆ. ಆದರೆ ಇಲ್ಲಿನ ಬಹುತೇಕ ರಸ್ತೆ, ಚರಂಡಿ ಪರಿಸ್ಥಿತಿಯನ್ನು ನೋಡಿದರೆ ಯಾವ ಕೊಳಚೆ ಪ್ರದೇಶಗಳಿಗೂ ಕಡಿಮೆ ಇಲ್ಲ ಎನ್ನುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಗುಂಡಿ, ಕೆಸರುಮಯ ರಸ್ತೆ: ಬಡಾವಣೆಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ಬಂದರಂತೂ ಕೆಸರುಮಯ ಆಗುತ್ತದೆ. ರಾತ್ರಿ ಸಂಚಾರವಂತೂ ದುಸ್ತರವಾಗಿದ್ದು, ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವುದೇ ಸರ್ಕಸ್ ಮಾಡಿದಂತಾಗುತ್ತದೆ.

ADVERTISEMENT

ಬೀದಿ ದೀಪಗಳು ಇದ್ದೂ ಇಲ್ಲದಂತಾಗಿದ್ದು, ಕತ್ತಲಲ್ಲಿ ಮಹಿಳೆಯರು, ಮಕ್ಕಳ ಓಡಾಡುವುದೂ ದುಸ್ತರವಾಗಿದೆ. ಬಡಾವಣೆಯ ಪ್ರಮುಖ ಚರಂಡಿಗಳಲ್ಲಿ ಹುಲ್ಲು, ಕುರುಚಲು ಗಿಡಗಳು ಬೆಳೆದಿದ್ದು, ಚರಂಡಿಗೆ ಹರಿಯುವ ಕಲುಷಿತ ನೀರು ತುಂಬಿ ರಸ್ತೆಗೆ ಹರಿಯುವುದರಿಂದ ಸುತ್ತಲಿನ ಪರಿಸರ ಮಲಿನವಾಗುತ್ತಿದೆ. ನಾನಾ ರೋಗಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ಇಲ್ಲಿನ ನಿವಾಸಿ ಸತೀಶ್ ಆರೋಪಿಸಿದ್ದಾರೆ.

ಬಡಾವಣೆಗಳ ಪರಿಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳಾಗಲಿ, ನಗರ ಪಾಲಿಕೆಯ ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದ್ದು, ಇಲ್ಲಿನ ಸಾವಿರಾರು ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಕಂದಾಯ ವಸೂಲಿ ಮಾಡುವುದನ್ನು ಬಿಟ್ಟರೆ, ಬಡಾವಣೆಗೆ ಬೇಕಾದ ಮೂಲಸೌಕರ್ಯ, ಉತ್ತಮ ರಸ್ತೆ, ಚರಂಡಿ ಒದಗಿಸುವಲ್ಲಿ ನಗರಪಾಲಿಕೆ ವಿಫಲವಾಗಿದೆ ಎಂದು ನಿವಾಸಿಗಳು ಆರೋಪ ಮಾಡಿದ್ದಾರೆ. 

ಬಿ.ಕಾಟೀಹಳ್ಳಿ ಗ್ರಾಮದ ಬಡಾವಣೆಯಲ್ಲಿ ಮೂಲಸೌಕರ್ಯಗಳಿಲ್ಲದೇ ಜನರು ಪರಿತಪಿಸುವಂತಾಗಿದೆ.
ಬಿ.ಕಾಟೀಹಳ್ಳಿಯ ಆರೋಗ್ಯ ಬಡಾವಣೆಯ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿವೆ.

ಮಕ್ಕಳ ಓಡಾಟಕ್ಕೂ ತೊಂದರೆ

ಈ ಬಡಾವಣೆ ಒಂದೂವರೆ ದಶಕದಿಂದ ಗ್ರಾಮ ಪಂಚಾಯಿತಿ ಆಡಳಿತದಲ್ಲಿದ್ದು ಇದೀಗ ನಗರ ಪಾಲಿಕೆ ವ್ಯಾಪ್ತಿಗೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಅಗತ್ಯ ಮೂಲಸೌಕರ್ಯ ದೊರೆಯುವ ಆಶಾಭಾವನೆಯಲ್ಲಿ ಇಲ್ಲಿನ ನಿವಾಸಿಗಳು ಇದ್ದಾರೆ. ಉಳಿದಂತೆ ಎಸ್‌ಬಿಎಂ ಶರಾವತಿ ನಂದಿನಿ ಟೀಚರ್ಸ್ ಸೇರಿದಂತೆ ಇತರೆ ಬಡಾವಣೆಗಳ ಪರಿಸ್ಥಿತಿಯು ಹೇಳುತೀರದಾಗಿದ್ದು ಇಲ್ಲಿನ ಸಾವಿರಾರು ಮನೆಗಳಿಗೆ ಸಮರ್ಪಕ ಯುಜಿಡಿ ರಸ್ತೆ ಇತರೆ ಸೌಲಭ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ಈ ಬಡಾವಣೆಗಳಿಗೆ ನಿತ್ಯ ಸುಮಾರು 10 ರಿಂದ 15 ಶಾಲಾ ವಾಹನಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಕಂಡು ವಾಹನ ಚಾಲಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಮತ್ತೊಂದೆಡೆ ಮಳೆ ಬಂದರಂತೂ ಶಾಲೆ ಮಕ್ಕಳು ಹಾಗೂ ಪೋಷಕರು ರಸ್ತೆಯಲ್ಲೂ ನಡೆದು ಹೋಗುವಾಗ ಗುಂಡಿಯಲ್ಲಿನ ಬಟ್ಟೆಗೆ ಕೆಸರು ಹಾರಿ ತೊಂದರೆ ಅನುಭವಿಸಿರುವ ಹಲವು ಉದಾಹರಣೆಗಳು ಇವೆ ಎಂದು ಪಾಲಕರು ದೂರುತ್ತಿದ್ದಾರೆ.

ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಪಾಲಿಕೆಗೆ ಸೇರಿದ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು
-ಸ್ವರೂಪ್‌ ಪ್ರಕಾಶ್, ಶಾಸಕ
ನಗರೋತ್ಥಾನ ಯೋಜನೆಯಡಿ ಶೀಘ್ರ ಕ್ರಿಯಾಯೋಜನೆ ತಯಾರಿಸುತ್ತಿದ್ದು ಈ ಬಡಾವಣೆಗಳಿಗೆ ರಸ್ತೆ ಚರಂಡಿ ಒಳಚರಂಡಿ ಸೇರಿದಂತೆ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು
-ಆನಂದ್, ಪಾಲಿಕೆ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.