ADVERTISEMENT

ಹಾಸನ ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಸದಸ್ಯರಿಂದ ನಗರದ ಸಮಸ್ಯೆಗಳ ಸುರಿಮಳೆ

ಮಹಾನಗರ ಪಾಲಿಕೆಯಾದ ಬಳಿಕ ಮಹಾಪೌರ ಬಿ.ಚಂದ್ರೇಗೌಡರ ಮೊದಲ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:30 IST
Last Updated 19 ಜುಲೈ 2025, 5:30 IST
ಹಾಸನದ ಮಹಾನಗರ ಪಾಲಿಕೆ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಾಪೌರ ಬಿ.ಚಂದ್ರೇಗೌಡ ಮಾತನಾಡಿದರು. ಶಾಸಕ ಸ್ವರೂಪ್ ಪ್ರಕಾಶ್, ಉಪ ಮಹಾಪೌರರಾದ ಹೇಮಲತಾ ಕಮಲ್ ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ ಇದ್ದಾರೆ 
ಹಾಸನದ ಮಹಾನಗರ ಪಾಲಿಕೆ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಾಪೌರ ಬಿ.ಚಂದ್ರೇಗೌಡ ಮಾತನಾಡಿದರು. ಶಾಸಕ ಸ್ವರೂಪ್ ಪ್ರಕಾಶ್, ಉಪ ಮಹಾಪೌರರಾದ ಹೇಮಲತಾ ಕಮಲ್ ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ ಇದ್ದಾರೆ    

ಹಾಸನ: ನಗರದಲ್ಲಿ ಬೇಕಾಬಿಟ್ಟಿ ಬೃಹತ್ ಜಾಹೀರಾತು ಕಮಾನು, ಫ್ಲೆಕ್ಸ್ ಅಳವಡಿಕೆ, ಬೀದಿ ದೀಪ ನಿರ್ವಹಣೆ ಸಮಸ್ಯೆ, ಬೀದಿ ನಾಯಿಗಳ ನಿಯಂತ್ರಣ ಸೇರಿ ನಾನಾ ವಿಷಯಗಳ ಕುರಿತು ಶುಕ್ರವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗಂಭೀರ ಚರ್ಚೆ ನಡೆಸಿದರು.

ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಇದೆ ಮೊದಲ ಬಾರಿಗೆ ಮಹಾಪೌರ ಎಂ.ಚಂದ್ರೇಗೌಡರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ನಗರದಲ್ಲಿ ಬೀದಿ ದೀಪ ಅಳವಡಿಕೆ ಸಮರ್ಪಕವಾಗಿ ಇಲ್ಲ. ಗುತ್ತಿಗೆ ಪಡೆದಿರುವ ವೇದ ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಸೇರಿ ಇತರ ಸದಸ್ಯರು ದೂರಿದರು.

ADVERTISEMENT

ಇದಕ್ಕೆ ಉತ್ತರಿಸಿದ ಪಾಲಿಕೆ ಎಂಜಿನಿಯರ್ ಕವಿತಾ ಅವರು ವೇದ ಎಲೆಕ್ಟ್ರಿಕಲ್ಸ್ ಅವರಿಗೆ ಅಸಮರ್ಪಕ ನಿರ್ವಹಣೆ ಸಂಬಂಧ ವಾಟ್ಸ್‌ ಆ್ಯಪ್ ಮೂಲಕ ಎಚ್ಚರಿಕೆ ನೀಡಲಾಗಿದೆ. ನಾಲ್ಕು ತಿಂಗಳಿನಿಂದ ಅವರಿಗೆ ಬಿಲ್ ಪಾವತಿ ಮಾಡಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಾಧಾನಗೊಂಡ ಸದಸ್ಯರು ಲಿಖಿತ ಸೂಚನೆ ನೀಡಿ ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದರು.

ಕಂದಾಯಕ್ಕೆ ವಿನಾಯಿತಿ ನೀಡಿ: ನಗರ ಪಾಲಿಕೆ ವ್ಯಾಪ್ತಿಗೆ ಕೆಲ ಗ್ರಾಮ ಪಂಚಾಯಿತಿ ಸೇರಿಸಲಾಗಿದ್ದು ಇಲ್ಲಿ ಈಗಾಗಲೇ ಮನೆ ನಿರ್ಮಿಸಿರುವವರು ಬಿ ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಎರಡು ವರ್ಷದ ಕಂದಾಯ ಕಟ್ಟುವಂತೆ ತಿಳಿಸಲಾಗಿದೆ. ಇದರಿಂದ ವಿನಾಯಿತಿ ನೀಡುವಂತೆ ಸದಸ್ಯ ರಕ್ಷಿತ್ ಪೌರಾಯುಕ್ತರ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಕೃಷ್ಣಮೂರ್ತಿ, ಸರ್ಕಾರದ ಸುತ್ತೋಲೆಯಂತೆ ಖಾತೆಗೆ ಅರ್ಜಿ ಸಲ್ಲಿಸಿದ ಹಿಂದಿನ ವರ್ಷದಿಂದ ಕಂದಾಯ ವಸೂಲಿಗೆ ನಿರ್ದೇಶನ ನೀಡಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಹೊಸದಾಗಿ ಸುತ್ತೋಲೆ ಬಂದರೆ ಅಗತ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಗರದ ಬಹುತೇಕ ಬಡಾವಣೆ ಹಾಗೂ ಹೊಸದಾಗಿ ನಿರ್ಮಿಸಿರುವ ಲೇಔಟ್‌ಗಳಲ್ಲಿ ಗಿಡಮರಗಳಿಲ್ಲ. ಇಂತಹ ಸ್ಥಳಗಳಲ್ಲಿ ಗಿಡ ನೆಡುವ ಕಾಳಜಿ ವಹಿಸಲು ಸದಸ್ಯ ರಕ್ಷಿತ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು ಹಾಗೂ ಮಹಾಪೌರರು ಗಿಡ ನೆಡುವ ಕೆಲಸವು ಪ್ರಗತಿಯಲ್ಲಿದೆ ಹಾಗೂ ಪ್ರತಿ ವಾರ್ಡ್‌ಗಳಲ್ಲೂ ಗಿಡ ಬೆಳಸುವುದಾಗಿ ಹೇಳಿದರು.

ನಗರದ ಪ್ರಮುಖ ಸರ್ಕಲ್‌ಗಳ ಬಳಿ ಆಳುದ್ದ ಜಾಹೀರಾತು ಕಮಾನುಗಳನ್ನು ಹಾಕಲಾಗಿದ್ದು ಕೂಡಲೇ ಇವುಗಳನ್ನು ತೆರವು ಮಾಡುವಂತೆ ಸದಸ್ಯರಾದ ಮಂಜು, ಯೋಗೇಂದ್ರಬಾಬು, ಶಂಕರ್ ಹಾಗೂ ಇತರೆ ಸದಸ್ಯರು ಒತ್ತಾಯಿಸಿದರು.

ಪಾಲಿಕೆಯಿಂದ ಅನುಮತಿ ಪಡೆಯದೆ ಜಾಹೀರಾತು ಕಮಾನುಗಳನ್ನು ಹಾಕಿದ್ದಾರೆ. ಇದರಿಂದ ಪಾಲಿಕೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಅಲ್ಲದೆ ಮುಂದೆ ಅನಾಹುತ ಸಂಭವಿಸುವ ಸಾಧ್ಯತೆಗಳು ಇದ್ದು, ತಕ್ಷಣವೇ ಇವುಗಳನ್ನು ತೆರವು ಮಾಡುವಂತೆ ಒತ್ತಾಯಿಸಿದರು. ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮಹಾಪೌರ ಚಂದ್ರೇಗೌಡ ಸೂಚನೆ ನೀಡಿದರು.

ಟೇಸ್ಟಿಂಗ್ ಪೌಡರ್ ಬಳಕೆ ನಿಯಂತ್ರಿಸಿ: ನಗರದ ಬೀದಿ ಬದಿ ಹಾಗೂ ಫುಡ್ ಕೋರ್ಟ್, ಹೋಟೆಲ್‌ಗಳಲ್ಲಿ ಶುಚಿತ್ವ ಇಲ್ಲದಾಗಿದೆ. ಜನರನ್ನು ಆಕರ್ಷಿಸಲು ಆಹಾರ ಪದಾರ್ಥಗಳಲ್ಲಿ ಟೇಸ್ಟಿಂಗ್ ಪೌಡರ್ ಹಾಗೂ ಬಣ್ಣ ಬಳಸಲಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ ಎಂದು ಸದಸ್ಯರು ದೂರಿದರು .

ಕಾಲಕಾಲಕ್ಕೆ ಪಾಲಿಕೆಯಿಂದ ಹೋಟೆಲ್ ಹಾಗೂ ಬೀದಿಬದಿ ವ್ಯಾಪಾರಿಗಳ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರೆ ಆಹಾರದಲ್ಲಿ ಕಲಬೇರೆಕೆ ನಿಲ್ಲಲಿದೆ ಎಂದರು.

ಇದಕ್ಕೆ ಉತ್ತರಿಸಿದ ಆಯುಕ್ತರು ಈಗಾಗಲೇ ಜಿಲ್ಲಾಧಿಕಾರಿ ಸಭೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೂ ಆಹಾರ ಇಲಾಖೆಗೆ ಮಹಾಪೌರರಿಂದ ಪತ್ರ ನೀಡುವ ಮೂಲಕ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ನಗರದಲ್ಲಿನ ಪ್ರಮುಖ ಬಡಾವಣೆಯಲ್ಲಿ ಕನ್ಸರ್‌ವೆನ್ಸಿಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಹೋಟೆಲ್ ಹಾಗೂ ಖಾಸಗಿ ಆಸ್ಪತ್ರೆಗಳು ತಮ್ಮ ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದು, ಬಹುತೇಕ ಕನ್ಸರ್‌ವೆನ್ಸಿ ಜಾಗಗಳಿಗೆ ಗೇಟ್‌ ಅಳವಡಿಸಿದ್ದಾರೆ. ಇವುಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ನಗರಪಾಲಿಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಶಾಸಕ ಸ್ವರೂಪ್ ಪ್ರಕಾಶ್, ನಗರ ಪಾಲಿಕೆ ಉಪಮೇಯರ್ ಹೇಮಲತಾ ಕಮಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಹಾಸನದ ಮಹಾನಗರ ಪಾಲಿಕೆ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು

ಪಿಒಪಿ ಮೂರ್ತಿ ತಯಾರಿಕೆ ನಿಷೇಧಿಸಿ 

ಗಣೇಶ ಹಬ್ಬ ಹತ್ತಿರ ಬರುತ್ತಿದ್ದು ಪಾಲಿಕೆಯಿಂದ ಈಗಿನಿಂದಲೇ ಪಿಒಪಿ ಗಣಪತಿ ಮೂರ್ತಿಗಳನ್ನು ತಯಾರಿಸುವುದನ್ನು ನಿಷೇಧ ಮಾಡಬೇಕು ಎಂದು ಸದಸ್ಯ ರಕ್ಷಿತ್ ಒತ್ತಾಯಿಸಿದರು. ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿ ಇಂದಿನಿಂದಲೇ ಪಿಒಪಿ ಬದಲು ಮಣ್ಣಿನ ಮೂರ್ತಿ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಚಾರ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಿದರು.

28 ಪೆಟ್ಟಿಗೆ ಅಂಗಡಿಗಳಿಗೆ ಜಾಗ ಕೊಡಿ

ಹಳೆ ಬಸ್ ನಿಲ್ದಾಣ ಸಮೀಪ ಈ ಹಿಂದೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ 28 ಪೆಟ್ಟಿಗೆ ಅಂಡಿಗಳನ್ನು ತೆರವು ಮಾಡಲಾಗಿತ್ತು. 40 ವರ್ಷದಿಂದ ಇದೇ ಅವರ ಜೀವನಕ್ಕೆ ಆಧಾರವಾಗಿತ್ತು. ಇದೀಗ ಅವರಿಗೆ ಸಿಟಿ ಬಸ್ ಸ್ಟ್ಯಾಂಡ್ ಬಳಿಯ ಜಟಕಾಗಾಡಿ ನಿಲ್ದಾಣ ಪಕ್ಕದಲ್ಲಿ ಗೂಡಂಗಡಿ ಇಟ್ಟುಕೊಳ್ಳಲು ನಗರ ಪಾಲಿಕೆಯಿಂದ ಇಂತಿಷ್ಟು ನೆಲ ಬಾಡಿಗೆ ಪಡೆದು ಅನುಮತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಮಹಾಪೌರರು ನೆಲ ಬಾಡಿಗೆ ಪಡೆದು ಪೆಟ್ಟಿಗೆ ಅಂಗಡಿಗೆ ಅವಕಾಶ ನೀಡಲು ನಮ್ಮ ಸಮ್ಮತಿ ಇದೆ ಎಂದು ಹೇಳಿದರು.

ಒತ್ತುವರಿ ತೆರವಿಗೆ ಮೀನಾಮೇಷ

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ನಗರಸಭೆ ಜಾಗ ಒತ್ತುವರಿ ಮಾಡಿರುವ ಕುರಿತು ಹಲವು ವರ್ಷಗಳಿಂದ ಗಂಭೀರ ಕ್ರಮಗಳು ಆಗಿಲ್ಲ ಎಂದು ಸದಸ್ಯ ಯೋಗೇಂದ್ರ ಬಾಬು ದೂರಿದರು. ಸಾಮಾನ್ಯ ಜನರು ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿದರೆ ಏಕಾಏಕಿ ತೆರವು ಮಾಡುತ್ತೀರಿ. ಈ ಸಂಸ್ಥೆ ಅನುಮತಿ ಪಡೆಯದೆ ಸಾಲಗಾಮೆ ರಸ್ತೆಯಲ್ಲಿ ಹತ್ತಾರು ಮಳಿಗೆಗಳನ್ನು ನಿರ್ಮಿಸಿದೆ. ಈ ಕುರಿತು ಮಹಾನಗರ ಪಾಲಿಕೆಯು ಸಂಸ್ಥೆ ವಿರುದ್ಧ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೆ.ಎಂ. ಶಾಲೆಯಿಂದ ಪಾಲಿಕೆ ಜಾಗ ಒತ್ತುವರಿ ತೆರವು ವಿಷಯದಲ್ಲಿಯೂ ಇದೇ ರೀತಿ ಮಾಡಲಾಗುತ್ತಿದೆ ಎಂದು ಸದಸ್ಯೆ ಸುಜಾತ ಮಹೇಶ್ ಆರೋಪಿಸಿದರು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾಪೌರರು ಪೌರಾಯುಕ್ತರಿಗೆ ತಾಕೀತು ಮಾಡಿದರು.

ಮುಸ್ಲಿಂ ಸದಸ್ಯರಿಂದ ಪ್ರತಿಭಟನೆ

ಮಹಾನಗರ ಪಾಲಿಕೆಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದ್ದು ಮುಸ್ಲಿಂ ಸದಸ್ಯರನ್ನ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸದಸ್ಯರು ಸಭೆ ಆರಂಭಕ್ಕೂ ಮೊದಲು ಪ್ರತಿಭಟನೆ ನಡೆಸಿದರು. ಸಭೆ ಆರಂಭವಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿ ಎಲ್ಲ ಸದಸ್ಯರನ್ನು ಸಮನಾಗಿ ಕಾಣಬೇಕು. ಆದರೆ ನಮ್ಮನ್ನ ಸಂಪೂರ್ಣ ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಿಜೆಪಿ ಸದಸ್ಯರು ನಮಗೂ ಅನ್ಯಾಯವಾಗುತ್ತಿದೆ ಎಂದು ದೂರಿದರು. ‘ಯಾರೂ ಜಾತಿ ಧರ್ಮವನ್ನು ತರಬೇಡಿ. ಎಲ್ಲ ಸದಸ್ಯರನ್ನು ಸಮನಾಗಿ ಕಾಣಲಾಗುತ್ತಿದೆ. ಇಲ್ಲಿ ಯಾವುದೇ ತಾರತಮ್ಯ ಮಾಡಲಾಗುತ್ತಿಲ್ಲ. ಒಂದು ವೇಳೆ ಆ ರೀತಿ ಆಗಿದ್ದರೆ ಅವುಗಳನ್ನು ಸರಿಪಡಿಸಲಾಗುವುದು’ ಎಂದು ಮಹಾಪೌರರು ಹೇಳಿದರು.

ನನ್ನ ವಾರ್ಡ್ ಸೇರಿ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಇಲ್ಲ. ನಾನೇ ಕೆಲವೊಮ್ಮೆ ಬೀದಿ ದೀಪಗಳನ್ನು ಆನ್ ಮತ್ತು ಆಫ್ ಮಾಡಿದ್ದೇನೆ.
-ಬಿ.ಚಂದ್ರೇಗೌಡ ಮಹಾಪೌರ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.