ADVERTISEMENT

ಸಹಕಾರ ಸಂಘದ ಸಾಧನೆಗೆ ಮೆಚ್ಚುಗೆ: ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 14:23 IST
Last Updated 9 ಆಗಸ್ಟ್ 2020, 14:23 IST
ಬಸವೇಗೌಡ
ಬಸವೇಗೌಡ   

ಹಾಸನ‌: ತಾಲ್ಲೂಕಿನ ಉಗನೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ಅವಿಸ್ಮರಣೀಯ ದಿನ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆತ್ಮ ‌ನಿರ್ಭರ್ ಅನ್ನದಾತ ಕುರಿತ ನೇರ ಟಿ.ವಿ. ಸಂವಾದದಲ್ಲಿ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಅವರೊಂದಿಗೆ ಮಾತನಾಡಿರುವುದು ರಾಜ್ಯದ ಗಮನ ಸೆಳೆದಿದೆ.

ಭಾಷಾಂತರಕಾರರ ನೆರವಿನೊಂದಿಗೆ ಬಸವೇಗೌಡ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಸಂಸ್ಥೆಯ ಪ್ರಾರಂಭ, ಬೆಳವಣಿಗೆ, ಸಾಧನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ರೈತರ ಕೃಷಿ ಸಂಬಂಧಿಸಿದ ವಿಷಯಗಳು, ಸಮಸ್ಯೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು.

ADVERTISEMENT

ಜಿಲ್ಲೆಯಲ್ಲಿನ ಕೃಷಿ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರಧಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸವೇಗೌಡ, ‘44 ವರ್ಷಗಳ ಹಿಂದೆ ಸಂಘ ಆರಂಭಿಸಿದ್ದು, 29 ಗ್ರಾಮಗಳ 2,300 ಕಿಸಾನ್ ಕುಟುಂಬಸ್ಥರು ಸದಸ್ಯರಾಗಿದ್ದಾರೆ. ವಾರ್ಷಿಕವಾಗಿ ಸಂಘ ₹ 50 ಕೋಟಿ ವಹಿವಾಟು ನಡೆಸುತ್ತದೆ. ರೈತರಿಗೆ ಸ್ಥಳೀಯವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕಳೆನಾಶಕ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳು ದೊರೆಯುತ್ತಿರಲಿಲ್ಲ. ಹಾಗಾಗಿ ಸಂಸ್ಥೆ ಸ್ಥಾಪಿಸಲಾಯಿತು. ಈಗ ರೈತರಿಗೆ ಸಂಘದ ವತಿಯಿಂದ ಕೃಷಿ ಸಂಬಂಧಿಸಿದ ವಸ್ತುಗಳ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ರೈತರ ಈ ಉತ್ತಮ ಚಟುವಟಿಕೆಗಳ ಬಗ್ಗೆ ತಿಳಿದ ಪ್ರಧಾನಿ, ‘ಸಂಘದ ವತಿಯಿಂದ ಈಗ ಯಾವ ಯೋಜನೆ ರೂಪಿಸಿದ್ದೀರಿ? ಹಾಗೂ ಅದರಿಂದ ರೈತರಿಗೆ ಯಾವ ರೀತಿಯ ಅನುಕೂಲವಾಗುತ್ತದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕಾರ್ಯದರ್ಶಿ, ‘ಗ್ರಾಮದಲ್ಲಿ 1200 ಮೆಟ್ರಿಕ್ ಟನ್ ಅಷ್ಟು ದಾಸ್ತಾನು ಮಾಡಬಹುದಾದ ಗೋದಾಮು ನಿರ್ಮಿಸಲು ಯೋಜಿಸಿದ್ದು, ₹ 40 ಲಕ್ಷ ವೆಚ್ಚವಾಗಲಿದೆ. ಅದಕ್ಕಾಗಿ ನಬಾರ್ಡ್ ನಿಂದ ₹ 32 ಲಕ್ಷ ಸಾಲ ಪಡೆಯಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಅಲ್ಲದೇ, ಈ ಗೋದಾಮು ನಿರ್ಮಾಣದಿಂದ ಸ್ಥಳೀಯವಾಗಿ ಸುಮಾರು 3,000 ರೈತರಿಗೆ ಉಪಯೋಗವಾಗಲಿದೆ. ಜಿಲ್ಲೆಯ ರೈತರು ಬೆಳೆಯುವ ಅಡಿಕೆ, ಮೆಕ್ಕೆಜೋಳ ಇತರೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುವವರೆಗೂ ವ್ಯವಸ್ಥಿತವಾಗಿ ದಾಸ್ತಾನು ಮಾಡಬಹುದು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಕೃಷಿ ಆದಾಯ ಹೆಚ್ಚಲಿದೆ. ರೈತರು ದಾಸ್ತಾನು ಮಾಡಿದ ಬೆಳೆಗೆ ಸಾಲ ಸೌಲಭ್ಯ ಸಹ ಒದಗಿಸಲಾಗುತ್ತದೆ. ಇದರ ನಿರ್ಮಾಣ ಕೆಲಸ ಮೂರು ತಿಂಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.

ಹಾಸನ ಜಿಲ್ಲೆಯ ರೈತರಂತೆ ಕರ್ನಾಟಕದ ಪ್ರತಿಯೊಂದು ಗ್ರಾಮದ ರೈತರು ಮುಂದಾಲೋಚನೆಯಿಂದ ತಮ್ಮ ಸಂಘಗಳ ಮೂಲಕ ಸಹಕಾರದಿಂದ ಕೃಷಿ ಸಂಬಂಧಿಸಿದ ಯೋಜನೆ ರೂಪಿಸಿಕೊಂಡು ಸಾಗಿದರೆ ಅನ್ನದಾತರ ಆತ್ಮ ನಿರ್ಭರ್ ಯೋಜನೆ ಯಶಸ್ವಿಯಾಗಲಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.