ಹಾಸನ: ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಮುಖಂಡ ಸಣ್ಣಸ್ವಾಮಿಯವರ ಮೇಲೆ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾ ಘಟಕದ ಮಾಜಿ ಸಹ ಸಂಚಾಲಕ ರತನ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಳಿ ಮೋಹನ್ ಅನಾಗರಿಕನಂತೆ ವರ್ತಿಸಿ, ಪಕ್ಷದ ನಾಯಕರಿಗೆ ಅವಮಾನ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ. ಈತನ ಮೇಲೆ ಗಂಭೀರ ಕ್ರಿಮಿನಲ್ ಆರೋಪಗಳಿದ್ದು, ಜನಪ್ರತಿನಿಧಿಯಾಗಲು ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಜಿಲ್ಲೆಯ ಡಿ.ಪಿ. ಮಲ್ಲೇಶ್ ಹಾಗೂ ಡಿ.ಸಿ. ಸಣ್ಣಸ್ವಾಮಿಯವರು ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಿ, ದಲಿತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಕಲೇಶಪುರ ಕ್ಷೇತ್ರಕ್ಕೆ ಮುರಳಿ ಮೋಹನ್ ನೀಡಿದ ಕೊಡುಗೆ ಶೂನ್ಯ. ಪರಾಭವಗೊಂಡ ಬಳಿಕ ದರ್ಪದ ರಾಜಕಾರಣ, ದೌರ್ಜನ್ಯ ಮತ್ತು ಬೆದರಿಕೆಗಳ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಮೇಲೆ ಒತ್ತಡ ತರುತ್ತಿರುವುದು ಪಕ್ಷಕ್ಕೆ ಹಾನಿ ಮಾಡುತ್ತಿದೆ ಎಂದು ಆರೋಪಿಸಿದರು.
ಡಿ.ಸಿ. ಸಣ್ಣಸ್ವಾಮಿ ಮೇಲೆ ನಡೆದ ಹಲ್ಲೆಯನ್ನು ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದವರು ಖಂಡಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮುರುಳಿ ಮೋಹನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸದಾಶಿವ್, ಕೃಷ್ಣಮೂರ್ತಿ, ರುದ್ರಪ್ಪ ಇದ್ದರು.
ಹಲ್ಲೆ ಆರೋಪ ಸುಳ್ಳು
ಹಾಸನ: ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಅವರ ವಿರುದ್ಧ ಮಾಡಲಾಗುತ್ತಿರುವ ಹಲ್ಲೆಯ ಆರೋಪಗಳು ಕೇವಲ ಅಪಪ್ರಚಾರವಾಗಿದೆ ಎಂದು ನಂದೀಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಸಣ್ಣಸ್ವಾಮಿ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಗಳು ಸತ್ಯಕ್ಕೆ ದೂರ. ಹಲ್ಲೆ ನಡೆದಿದ್ದರೆ ಅದೇ ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದರು. ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಸಣ್ಣಸ್ವಾಮಿ ಹಾಗೂ ಅವರ ಬೆಂಬಲಿಗರು ಪಕ್ಷದ ವರ್ಚಸ್ಸು ಕುಗ್ಗಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುರುಳಿ ಮೋಹನ್ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆ ಚಟುವಟಿಕೆಗಳನ್ನು ಸಹಿಸದೇ ಇಂತಹ ಅಪಪ್ರಚಾರ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಇತರೆ ನಾಯಕರು ಪಕ್ಷ ಸಂಘಟನೆಗೆ ವಿಫಲರಾಗಿದ್ದು, ಮುರುಳಿ ಮೋಹನ್ ವಾರದಲ್ಲಿ ಐದು ದಿನ ಸಂಪೂರ್ಣವಾಗಿ ಪಕ್ಷ ಸಂಘಟನೆಗೆ ಮೀಸಲಿಟ್ಟಿದ್ದಾರೆ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.
ಪಕ್ಷಕ್ಕೆ ಧಕ್ಕೆ ತರುವ ಹಾಗೂ ಪಕ್ಷದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಮಧು, ರವಿ, ಶ್ರೀಧರ್, ಅಮೀರ್ ಪಾಷಾ ಇದ್ದರು