ADVERTISEMENT

ಕಾಡಾನೆ ಸಮಸ್ಯೆಗೆ ಆಸ್ಸಾಂ ಮಾದರಿ ಅಳವಡಿಸಲು ಸಲಹೆ

ಕಾಡಾನೆ ಸಮಸ್ಯೆಗೆ ಪರಿಹಾರ: ಸಮನ್ವಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 7:47 IST
Last Updated 30 ಜನವರಿ 2026, 7:47 IST
   

ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆ ನಿವಾರಣೆಗೆ ರಚನೆಯಾಗಿರುವ ಸಮನ್ವಯ ಸಮಿತಿ ಸಭೆ ಬುಧವಾರ ಇಲ್ಲಿನ ರೆಡ್‌ಕ್ರಾಸ್‌ ಭವನದಲ್ಲಿ ಪ್ರಧಾನ ಸಂಚಾಲಕ ಆರ್‌.ಪಿ. ವೆಂಕಟೇಶ್‌ ಮೂರ್ತಿ ನೇತೃತ್ವದಲ್ಲಿ ನಡೆಯಿತು.

ಸುಮಾರು 16 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಕುರಿತು ಚರ್ಚೆ ನಡೆಯಿತು. ಈ ಯೋಜನೆಯನ್ನು ಸರ್ಕಾರ 2018ರಲ್ಲಿ ಸಿದ್ಧಪಡಿಸಿದ್ದು, ಇದರಡಿ ಸುಮಾರು 3 ಸಾವಿರ ಎಕರೆ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದರೆ ಯೋಜನೆ ಜಾರಿಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ‘ಆನೆ ಧಾಮ’ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಕೇವಲ ₹20 ಕೋಟಿ ನೀಡಲಾಗಿದೆ. ಕನಿಷ್ಠ ₹500 ಕೋಟಿ ಅನುದಾನ ಬಿಡುಗಡೆ ಆಗಬೇಕು. ಅಂದಾಗ ಮಾತ್ರ 1 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಧಾಮ ನಿರ್ಮಾಣ ಸಾಧ್ಯವಾಗಲಿದೆ. ಇದರಿಂದ ಪುಂಡಾನೆಗಳನ್ನು ನಿಯಂತ್ರಿಸಿ, ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ ಎಂಬ ಸಲಹೆ ಕೇಳಿ ಬಂತು.

ADVERTISEMENT

ಅಸ್ಸಾಂನಲ್ಲಿ ಶ್ರೀಮಂತರು ಟ್ರಸ್ಟ್‌ಗಳನ್ನು ಸ್ಥಾಪಿಸಿ, ಕಾಡಾನೆಗಳಿಗೆ ಅಗತ್ಯವಾದ ಆಹಾರ ಒದಗಿಸುವ ಯೋಜನೆ ರೂಪಿಸಿದ್ದಾರೆ. ಈ ಕುರಿತು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಹಾಗೂ ಇತರರು ಅಸ್ಸಾಂಗೆ ತೆರಳಿ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿಸಿದರು.

ಇದೇ ಮಾದರಿಯನ್ನು ನಮ್ಮ ರಾಜ್ಯದಲ್ಲಿಯೂ ಅನುಸರಿಸಿ, ಟ್ರಸ್ಟ್ ರಚಿಸಿ‌ ನೇಪಿಯರ್ ಹುಲ್ಲು, ಬಾಳೆ, ಬಿದಿರು ಸೇರಿದಂತೆ ಆನೆಗಳಿಗೆ ಅಗತ್ಯವಾದ ಆಹಾರ ಬೆಳೆಗಳನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆದರೆ, ಕಾಡಾನೆಗಳು ನಾಡಿನತ್ತ ನುಗ್ಗುವುದನ್ನು ತಡೆಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವು ಅಗತ್ಯವಾಗಿದ್ದು, ಈ ಕುರಿತು ಒತ್ತಡ ಹೇರುವ ಬಗ್ಗೆ ಚರ್ಚಿಸಲಾಯಿತು.

ಹಾಸನ ಸೇರಿದಂತೆ ನೆರೆಯ ನಾಲ್ಕು ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ಪರಿಸರವಾದಿಗಳ ನೇತೃತ್ವದಲ್ಲಿ ಟ್ರಸ್ಟ್ ರಚಿಸಿ ಕಾಡಾನೆ ನಿಯಂತ್ರಣಕ್ಕೆ ಸಮಗ್ರ ಯೋಜನೆ ರೂಪಿಸುವುದರ ಜೊತೆಗೆ, ಗಾಯಗೊಂಡ ಕಾಡಾನೆಗಳಿಗೆ ಚಿಕಿತ್ಸೆ ನೀಡುವ ವಿಶೇಷ ಕೇಂದ್ರ ಸ್ಥಾಪನೆಯ ಅಗತ್ಯವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಹೆಮ್ಮಿಗೆ ಮೋಹನ್, ಲಕ್ಷ್ಮಿನಾರಾಯಣ್, ಆನಂದ್, ಆಲೂರಿನ ಹೇಮಂತ್‌ಕುಮಾರ್‌, ಕೆಜಿಎಫ್‌ನ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಮಾಜಿ ಶಾಸಕ ಎಚ್.ಎಂ. ವಿಶ್ವನಾಥ ಹಾಗೂ ಅರೇಹಳ್ಳಿಯ ರಾಜೇಗೌಡರು ದೂರವಾಣಿ ಮೂಲಕ ತಮ್ಮ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.