ಹಾಸನ: ನಗರದ ಗಣಪತಿ ಸೇವಾ ಸಂಸ್ಥೆಯಿಂದ ಆಯೋಜನೆಗೊಂಡ 71ನೇ ಗಣೇಶೋತ್ಸವ ಹಿನ್ನೆಲೆ ಇಲ್ಲಿನ ಸಿಟಿ ಬಸ್ ನಿಲ್ದಾಣದ ರಸ್ತೆ ಪೆಂಡಾಲ್‌ನಲ್ಲಿ 24 ದಿನಗಳಿಂದ ಪ್ರತಿಷ್ಠಾಪಿಸಲಾದ ಮೂರ್ತಿಯನ್ನು ಶನಿವಾರ ಅದ್ದೂರಿ ಮೆರವಣಿಗೆ ಮೂಲಕ ರಾತ್ರಿ ದೇವಿಗೆರೆಯಲ್ಲಿ ವಿಸರ್ಜಿಸಲಾಯಿತು.
ಬೆಳಿಗ್ಗೆ 10.45 ಕ್ಕೆ ಪೆಂಡಾಲ್ ಮುಂಭಾಗದಿಂದ ಹೊರಟ ಗಣಪತಿ ಮೂರ್ತಿಯ ರಥಕ್ಕೆ ಹಾಗೂ ದಸರಾ ಮಾದರಿಯ ಮೆರವಣಿಗೆಗೆ ಕರ್ಪೂರ ಹಚ್ಚಿ, ಡೋಲು ಬಾರಿಸುವ ಮೂಲಕ ಶಾಸಕ ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮೇಯರ್ ಗಿರೀಶ್ ಚನ್ನವೀರಪ್ಪ, ಸಮಿತಿ ಅಧ್ಯಕ್ಷ ಡಾ.ನಾಗರಾಜ್ ಸೇರಿದಂತೆ ಇತರೆ ಗಣ್ಯರೊಂದಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೇಯಸ್ ಪಟೇಲ್, ಏಳೂವರೆ ದಶಕಗಳಿಂದ ಗಣಪತಿ ಸೇವಾ ಸಂಸ್ಥೆ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಗಣೇಶ ಚತುರ್ಥಿಯ ಆರಂಭ ದಿನದಿಂದ ವಿಸರ್ಜನೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಸಮಿತಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಪರಸ್ಪರ ಸ್ನೇಹ, ಏಕತೆ, ಸಾಮರಸ್ಯ, ಭ್ರಾತೃತ್ವದ ಸಂಕೇತವಾದ ಗಣೇಶೋತ್ಸವ ಎಲ್ಲರಿಗೂ ಒಳಿತು ಮಾಡಲಿ. ಗಣೇಶನ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಂತಸ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
ಸೆ.23 ರಂದು ಮಧ್ಯಾಹ್ನ 12.30ಕ್ಕೆ ಗಣಪತಿ ಮಹೋತ್ಸವದ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಸಲಾಗುವುದು. 10 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಸಮಿತಿ ತಿಳಿಸಿದ್ದು, ಈ ಎರಡೂ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಗಣಪತಿ ಸೇವಾ ಸಂಸ್ಥೆ ಸದಸ್ಯರು ಮನವಿ ಮಾಡಿದರು.
ಉಪ ಮೇಯರ್ ಹೇಮಲತಾ, ಧರ್ಮದರ್ಶಿಗಳಾದ ಲಲಾಟ ಮೂರ್ತಿ, ಬೂದೇಶ್, ಎಚ್.ಟಿ. ಶೇಖರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಎಂ.ಟಿ. ಸುರೇಶ್ ಕುಮಾರ್, ಎಂ.ಕೆ. ಕಮಲ್ ಕುಮಾರ್, ಎಚ್.ಡಿ. ದೀಪಕ್, ಲೀಲಾಕುಮಾರ್, ಗಿರೀಗೌಡ, ಸಿ. ರಾಮಚಂದ್ರಯ್ಯ, ಕೆ.ಪಿ.ಎಸ್. ಪ್ರಮೋದ್, ಎಚ್.ಪಿ. ಕಿರಣ್, ಪಿ.ಆರ್. ನಾಗೇಂದ್ರ, ಸಿ.ಕೆ. ಪದ್ಮನಾಭ್, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ.ಮದನ್ ಗೌಡ, ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಕೆಂಚೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಗೌಡಗೆರೆ ಪ್ರಕಾಶ್, ಬಿದರಿಕೆರೆ ಜಯರಾಂ, ಕಟ್ಟಾಯ ಶಿವಕುಮಾರ್, ಹನುಮಂತೇಗೌಡ, ಮಹಂತೇಶ್, ಕುಮಾರ್ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.
ಪೊಲೀಸ್ ಬಂದೋಬಸ್ತ್
ಅದ್ದೂರಿ ಮೆರವಣಿಗೆ ಹಿನ್ನೆಲೆಯಲ್ಲಿ ಎಎಸ್ಪಿ ತಮ್ಮಯ್ಯ ವೆಂಕಟೇಶ್ ನಾಯ್ಡು ಡಿವೈಎಸ್ಪಿ ಮುರುಳೀಧರ್ ಪ್ರಮೋದ್ ಸರ್ಕಲ್ ಇನ್‌ಸ್ಪೆಕ್ಟರ್ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 300 ಕ್ಕೂ ಹೆಚ್ಚ ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಕಲಾತಂಡಗಳ ವೈಭವ
ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ವೀರಗಾಸೆ ಹುಲಿ ವೇಷ ಕಂಸಾಳೆ ನಂದಿಧ್ವಜ ಕರಾವಳಿ ಶೈಲಿ ಡೋಲು ಕುಣಿತ ನಾಸಿಕ್ ಡೋಲು ಗೊರವ ಕುಣಿತ ಮಹಿಳಾ ನಗಾರಿ ಕೋಲಾಟ ವೀರಭದ್ರ ಕುಣಿತ ಚಿಟ್ಟಿಮೇಳ ಪೂಜಾ ಕುಣಿತ ಚೆಂಡೆ ರಂಗ ಕುಣಿತ ಎತ್ತರ ಮಾನವ ಸುಗ್ಗಿ ಕುಣಿತ ಮಹಿಳೆಯರ ಡೊಳ್ಳು ಕುಣಿತ ಪ್ರಚಾರ ವಾಹನ ಮತ್ತು ಜಾನಪದ ಗಾಯನ ಪಟಾಕಿ ಸಿಡಿ ಮದ್ದಿನೊಂದಿಗೆ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಮೆರವಣಿಗೆಯು ನಗರದ ಪಿಕ್ಚರ್ ಪ್ಯಾಲೇಸ್ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಹಾಸನಾಂಬ ವೃತ್ತ ನಗರಸಭೆ ವಲ್ಲಭಭಾಯಿ ರಸ್ತೆ ಹೊಸಲೈನ್ ರಸ್ತೆ ಬಸವೇಶ್ವರ ವೃತ್ತ ಅರಳಿಪೇಟೆ ಸಹ್ಯಾದ್ರಿ ವೃತ್ತ ಸ್ಲೇಟರ್ಸ್ ಹಾಲ್ ಸಂಪಿಗೆ ರಸ್ತೆ ಮೂಲಕ ಬಿ.ಎಂ. ರಸ್ತೆ ಸೇರಿ ನಂತರ ಎನ್.ಆರ್. ವೃತ್ತದ ಮೂಲಕ ಸಂಚರಿಸಿ ದೇವಿಗೆರೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.