ADVERTISEMENT

ಹಾಸನ: ಗುಡುಗು ಸಹಿತ ರಭಸದ ಮಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 14:32 IST
Last Updated 15 ಅಕ್ಟೋಬರ್ 2021, 14:32 IST
ಹಾಸನದ ಆರ್‌.ಸಿ. ರಸ್ತೆಯಲ್ಲಿ ಚರಂಡಿ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವ ದೃಶ್ಯ.
ಹಾಸನದ ಆರ್‌.ಸಿ. ರಸ್ತೆಯಲ್ಲಿ ಚರಂಡಿ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವ ದೃಶ್ಯ.   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ.

ನಗರದಲ್ಲಿ ಸುಮಾರು ಒಂದು ತಾಸಿಗೂ ಅಧಿಕ ರಭಸದ ಮಳೆ ಸುರಿದ ಪರಿಣಾಮ ಜನಜೀವನಅಸ್ತವ್ಯಸ್ತವಾಯಿತು. ಹಲವು ರಸ್ತೆಗಳಲ್ಲಿ ಜಲಾವೃತವಾಗಿ ವಾಹನ ಸಂಚಾರಕ್ಕೆ ವಾಹನ ಸಂಚಾರಕ್ಕೆಅಡ್ಡಿಯಾಗಿದೆ. ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಬಿ.ಎಂ ರಸ್ತೆ, ಎಂ.ಜಿ. ರಸ್ತೆ, ಮಹಾವೀರ ವೃತ್ತದಲ್ಲಿ ನೀರು ನಿಂತು ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಯಿತು. ನಗರದಲ್ಲಿ ಯುಜಿಡಿ, ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಗಳಿಗಾಗಿ ಅಗೆದಿರುವ ರಸ್ತೆಗಳಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿದ್ದು, ಜನರು ಕಾಲ್ನಡಿಗೆಯಲ್ಲಿ ಸಂಚರಿಸುವುದೂ ದುಸ್ತರವಾಗಿದೆ.

ADVERTISEMENT

ನಗರದ ಕೆಲವು ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿ, ಸಾಕಷ್ಟು ತೊಂದರೆ ಉಂಟಾಯಿತು. ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ 5 ಗಂಟೆಗೆ ಗುಡುಗು ಸಹಿತ ಮಳೆ
ಸುರಿಯಲು ಆರಂಭಿಸಿತು. ಹವಾಮಾನ ಇಲಾಖೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ
‘ಆರೆಂಜ್ ಅಲರ್ಟ್‌’ ಘೋಷಿಸಿತ್ತು.

ಸಕಲೇಶಪುರ ತಾಲ್ಲೂಕಿನಲ್ಲೂ ಮಧ್ಯಾಹ್ನ ಒಂದು ತಾಸು ಧಾರಾಕಾರ ಮಳೆ ಸುರಿಯಿತು. ಒಂದು ವಾರದಿಂದಲೂ ತುಂತುರು ಮಳೆಯಾಗುತ್ತಿದೆ. ಆದರೆ ಇಂದು ರಭಸದ ಮಳೆ ಸುರಿದಿದೆ.ವಿಜಯದಶಮಿ ವಿಶೇಷ ಪೂಜೆಗಾಗಿ ದೇವಸ್ಥಾನಗಳಿಗೆ ತೆರಳಿದ್ದ ಭಕ್ತರು ಮನೆ ತಲುಪಲು ಪರದಾಡುವಂತಾಯಿತು. ಚರಂಡಿಗಳುತುಂಬಿ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.