ADVERTISEMENT

ಹಾಸನ | ಧೀಮಂತ ಮಹಿಳೆ ಹೇಮರೆಡ್ಡಿ ಮಲ್ಲಮ್ಮ: ಸಾಹಿತಿ ಸುಶೀಲಾ ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 10 ಮೇ 2025, 12:54 IST
Last Updated 10 ಮೇ 2025, 12:54 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.   

ಹಾಸನ: ಶಿವಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಅವರು ಅವಿದ್ಯಾವಂತಳಾದರೂ ಬುದ್ಧಿವಂತೆ. ಸುಸಂಸ್ಕೃತಿಗಳಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಮಹಾ ಧೀಮಂತ ಮಹಿಳೆ ಎಂದು ಸಾಹಿತಿ ಸುಶೀಲಾ ಸೋಮಶೇಖರ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ  ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಂಧ್ರಪ್ರದೇಶ– ಕರ್ನಾಟಕದ ಗಡಿ ಪ್ರದೇಶದಲ್ಲಿರುವ ರಾಮಪುರ ಗ್ರಾಮದಲ್ಲಿ ಜನಿಸಿದ ಹೇಮರೆಡ್ಡಿ ಮಲ್ಲಮ್ಮ, ವೀರಶೈವ ಲಿಂಗಾಯತ ರೆಡ್ಡಿ ಮನೆತನಕ್ಕೆ ಸೇರಿದವರಾಗಿದ್ದಾರೆ. ಸಭ್ಯತೆಯುಳ್ಳ, ಪರಮ ಸಾಧ್ವಿ ಹೆಣ್ಣು ಮಗಳು. ತನ್ನ ಅತ್ತೆ ಕೊಡುವ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಮೈದುನನ ಮನಃಪರಿವರ್ತನೆ ಮಾಡಿ, ಕವಿಯಾಗಿ ಮಾಡಿದ ಮಹಾ ಮಹಿಳೆ. ಇಂದು ನಾವು ಈ ರೀತಿಯ ಮಹಿಳೆಯಾಗಿ ಮಾರ್ಪಾಡಾಗಬೇಕು ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಮಾತನಾಡಿ, ಪ್ರತಿಯೊಂದು ಜಯಂತಿಗೂ ಅದರದ್ದೇ ಆದ ಹಿನ್ನೆಲೆ ಇದೆ. ಹಾಗಾಗಿ ಮಹನೀಯರ ಜಯಂತಿಗಳಿಗೆ ಯಾವುದೇ ಜಾತಿ, ಧರ್ಮಗಳ ಭೇದಭಾವವಿಲ್ಲದೇ ಎಲ್ಲರೂ ಸೇರಿ ಆಚರಿಸಬೇಕು. ಅವರ ತತ್ವ, ಸಾಧನೆ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದರು.

ತಹಶೀಲ್ದಾರ ಹುಲಿವಾಲ ಮೋಹನ್ ಕುಮಾರ್ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನಂಥವರು ಕೆಲವೇ ಕೆಲವು ಸಾಹಿತ್ಯ ಆಸಕ್ತಿಯುಳ್ಳವರಿಗೆ ಪರಿಚಯವಾಗಿರುತ್ತಾರೆ. ಆದರೆ ಇಂತಹ ಜಯಂತಿ ಆಚರಿಸುವ ಮೂಲಕ ಅವರ ಸಾಧನೆಗಳನ್ನು ನಾವೆಲ್ಲರೂ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಮುದಾಯದ  ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.