ADVERTISEMENT

ಹಾಸನ ಇಲ್ಲವೇ, ಮಂಡ್ಯ ಕ್ಷೇತ್ರ ಬಿಟ್ಟು ಕೊಡಲಿ: ಕಾಂಗ್ರೆಸ್ ಮುಖಂಡ ಎ.ಮಂಜು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 13:49 IST
Last Updated 11 ಮಾರ್ಚ್ 2019, 13:49 IST
ಎ.ಮಂಜು
ಎ.ಮಂಜು   

ಹಾಸನ: ‘ಹಾಸನ ಅಥವಾ ಮಂಡ್ಯ ಯಾವುದಾದರೂ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎ.ಮಂಜು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ ಗೆದ್ದಿರುವ ಕ್ಷೇತ್ರ ಕೇಳಬಾರದೆಂದರೆ, ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರವನ್ನು ಕೇಳಬಾರದು. ಇದು ಮೊದಲಿನಿಂದಲೂ ನಮ್ಮ ಬೇಡಿಕೆಯಾಗಿದೆ’ ಎಂದರು.

‘ದೇವೇಗೌಡರು ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯರ ಬಗ್ಗೆಯೇ ಯೋಚನೆ ಮಾಡುವುದಾದರೆ, ಬೇರೆ ಪಕ್ಷದ ನಾಯಕರು ಏನು ಮಾಡಬೇಕು?. ಕೆಲಸ ಮಾಡಿ ಟಿಕೆಟ್‌ ಕೇಳಿದ್ದರೆ ಒಪ್ಪಬಹುದು. ಹಾಸನ ಜಿಲ್ಲೆಯ ಬಗ್ಗೆ ಅರಿಯದ ಪ್ರಜ್ವಲ್‌ಗೆ ಟಿಕೆಟ್‌ ನೀಡಿದರೆ ಬೆಂಬಲ ನೀಡುವುದಿಲ್ಲ.ಈಗಲೂ ಕಾಲ ಮಿಂಚಿಲ್ಲ. ದೇವೇಗೌಡರ ಕುಟುಂಬ ಮನಸ್ಸು ಬದಲಾಯಿಸಿದರೆ ಉತ್ತಮ. ಗೌಡರು ಅಭ್ಯರ್ಥಿಯಾಗದಿದ್ದರೆ ಸಮ್ಮಿಶ್ರ ಸರ್ಕಾರದ ಪರವಾಗಿ ಕೆಲಸ ಮಾಡುವುದಿಲ್ಲ. ಮೊದಲಿನಿಂದಲೂ ಗೌಡರ ಕುಟುಂಬದ ರಾಜಕೀಯದ ವಿರುದ್ಧ ಇದ್ದೇನೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಸುಮಲತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಾಗಿದೆ. ದೇವೇಗೌಡರು, ಇಂದಿರಾ ಗಾಂಧಿ ಅವರ ವಂಶ ಪಾರಂಪರ್ಯ ರಾಜಕೀಯ ವಿರೋಧಿಸಿದರು. ಈಗ ಅವರಿಗೆ ಇದೆಲ್ಲವೂ ನೆನಪಾಗುವುದಿಲ್ಲವೇ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್‌ 12 ಸೀಟು ನೀಡುವಂತೆ ಬೇಡಿಕೆ ಇಟ್ಟಿದೆ. ಮೂರು ಸ್ಥಾನ ನೀಡಬಹುದು. ಸಮ್ಮಿಶ್ರ ಸರ್ಕಾರದ ಮೈತ್ರಿ ಗಟ್ಟಿಯಾಗಬೇಕಾದರೆ ಅವರವರ ಸ್ಥಾನವನ್ನು ಅವರಿಗೆ ಬಿಟ್ಟುಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.