ADVERTISEMENT

ಹಾಸನ | ಬೇಕಾಬಿಟ್ಟಿ ಫಲಕ: ತೆರವುಗೊಳಿಸಲು ಆಗ್ರಹ

ಮಹಾನಗರ ಪಾಲಿಕೆ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಜಾಹೀರಾತು ಫಲಕ ವಿವಾದ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:44 IST
Last Updated 7 ಅಕ್ಟೋಬರ್ 2025, 5:44 IST
ಹಾಸನ ಮಹಾನಗರ ಪಾಲಿಕೆ ಸಭೆಯಲ್ಲಿ ಮೇಯರ್ ಗಿರೀಶ್‌ ಚನ್ನವೀರಪ್ಪ ಮಾತನಾಡಿದರು. ಉಪ ಮೇಯರ್ ಹೇಮಲತಾ, ಆಯುಕ್ತ ಕೃಷ್ಣಮೂರ್ತಿ ಭಾಗವಹಿಸಿದ್ದರು
ಹಾಸನ ಮಹಾನಗರ ಪಾಲಿಕೆ ಸಭೆಯಲ್ಲಿ ಮೇಯರ್ ಗಿರೀಶ್‌ ಚನ್ನವೀರಪ್ಪ ಮಾತನಾಡಿದರು. ಉಪ ಮೇಯರ್ ಹೇಮಲತಾ, ಆಯುಕ್ತ ಕೃಷ್ಣಮೂರ್ತಿ ಭಾಗವಹಿಸಿದ್ದರು   

ಹಾಸನ: ನಗರದ ಪ್ರಮುಖ ವೃತ್ತ ಹಾಗೂ ಇತರೆಡೆ ಜಾಹೀರಾತು ಕಮಾನುಗಳು ಹಾಗೂ ಫಲಕಗಳನ್ನು ಬೇಕಾಬಿಟ್ಟಿ ಹಾಕಲಾಗಿದೆ. ಈ ಬಗ್ಗೆ ಮೇಯರ್ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತೆರವು ಮಾಡುವಂತೆ ಮಹಾನಗರ ಪಾಲಿಕೆ ಸದಸ್ಯರು ಒತ್ತಾಯಿಸಿದರು.

ಸೋಮವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಮಂಜುನಾಥ್, ಶಂಕರ್ ಹಾಗೂ ಯೋಗೇಂದ್ರ ಬಾಬು, ಜಾಹೀರಾತು ಅಳವಡಿಕೆ ಅನುಮತಿ ನೀಡಿರುವ ಕಡತ ಕಳವಾಗಿರುವ ಬಗ್ಗೆ ಹಿಂದಿನ ಆಯುಕ್ತರಿಗೆ ನೋಟಿಸ್ ನೀಡಲಾಗಿದೆ. ಇದುವರೆಗೂ ಉತ್ತರ ನೀಡಿಲ್ಲ ಎಂದರು.

15 ವರ್ಷ ಅನುಮತಿ ನೀಡಲು ಬೈಲಾದಲ್ಲಿ ಅವಕಾಶ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಪರಾಮರ್ಶೆ ಬೇಡ. ಕೂಡಲೇ ಅನಧಿಕೃತವಾಗಿ ಹಾಕಿರುವ ಜಾಹೀರಾತು ಕಮಾನುಗಳನ್ನು ತೆರವು ಮಾಡುವಂತೆ ಸದಸ್ಯ ಕ್ರಾಂತಿ ಪ್ರಸಾದ್‌ ತ್ಯಾಗಿ ಒತ್ತಾಯಿಸಿದರು.

ADVERTISEMENT

ಪಾಲಿಕೆಯಿಂದ ಕಾನೂನು ಬದ್ಧವಾಗಿ ಅನುಮತಿ ಪಡೆಯದೇ ವಾರಕ್ಕೊಮ್ಮೆ ಜಾಹೀರಾತು ಫಲಕಗಳನ್ನು ಬದಲು ಮಾಡಲಾಗುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಏಕೆ ಗಮನಹರಿಸುತ್ತಿಲ್ಲ. ಈ ರೀತಿ ಅಕ್ರಮ ಎಸಗುತ್ತಿರುವ ಜಾಹೀರಾತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸದಸ್ಯರು ಆಗ್ರಹಿಸಿದರು.

ಹಲವು ಸಭೆಗಳಲ್ಲಿ ಜಾಹೀರಾತು ಫಲಕ ತೆರವಿಗೆ ಒತ್ತಾಯಿಸಿದ್ದೇವೆ. ಆದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಯೋಗೇಂದ್ರಬಾಬು ಅಸಮಾಧಾನ ವ್ಯಕ್ತಪಡಿಸಿದರು. ಕಾನೂನುಬಾಹಿರವಾಗಿ ಫಲಕ ಹಾಕಿದ್ದರೆ ನೋಟಿಸ್ ಕೊಡುತ್ತೇವೆ ಎಂದರೂ ಸುಮ್ಮನಾಗದ ಕೆಲ ಸದಸ್ಯರು, ಒಂದು ವರ್ಷದ ಬದಲಿಗೆ 15 ವರ್ಷ ಎಂದು ಪರವಾನಗಿ ಪಡೆಯಲಾಗಿದೆ. ಕೂಡಲೇ ಜಾಹೀರಾತು ಫಲಕಗಳನ್ನು ಕಿತ್ತು ಬಿಸಾಕುವಂತೆ ಒತ್ತಾಯಿಸಿದರು.

ಮೇಯರ್ ಗಿರೀಶ್‌ ಚನ್ನವೀರಪ್ಪ ಮಾತನಾಡಿ, ಗುತ್ತಿಗೆದಾರರಿಗೆ ನೋಟಿಸ್ ಕೊಡುತ್ತೇವೆ. ಅನುಮತಿ ವಿರುದ್ಧವಾಗಿ ನಡೆದುಕೊಂಡಿದ್ದರೆ, ಖಂಡಿತವಾಗಿಯೂ ಕಾನೂನು ಕ್ರಮ ಆಗಲಿದೆ ಎಂದು ಭರವಸೆ ನೀಡಿದರು.

ಸಮಸ್ಯೆಗಳ ಅನಾವರಣ: ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಗರ ಅಭಿವೃದ್ಧಿಯ ಸೇರಿದಂತೆ ನಾನಾ ವಿಷಯಗಳ ಕುರಿತು ಸದಸ್ಯರು ಚರ್ಚೆ ನಡೆಸಿದರು‌. ಈ ಹಿಂದಿನ ಸಭೆಗಳಲ್ಲಿ ಚರ್ಚಿತವಾದ ಕೆಲ ಗಂಭೀರ ವಿಷಯಗಳ ಕುರಿತು ಸದಸ್ಯರು ಸಭೆಯ ಗಮನಕ್ಕೆ ತಂದರು.

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಒತ್ತುವರಿ ಮಾಡಿರುವ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯುವ ಕುರಿತು ಏಳು ವರ್ಷದಿಂದ ಚರ್ಚಿಸಲಾಗುತ್ತಿದೆ. ಆದರೆ ಇದುವರೆಗೂ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸದಸ್ಯ ಯೋಗೇಂದ್ರ ಬಾಬು ಸೇರಿದಂತೆ ಇತರೆ ಸದಸ್ಯರು ಹೇಳಿದರು.

ಈ ವೇಳೆ ಮಾತನಾಡಿದ ಮೇಯರ್ ಗಿರೀಶ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಇರುವ ನಿವೇಶನ, ಕಟ್ಟಡ ಹಾಗೂ ನಗರ ಪಾಲಿಕೆಗೆ ಸಂದಾಯವಾಗುತ್ತಿರುವ ಕಂದಾಯದ ಕುರಿತು ಹಿಂದಿನ ಸಭೆಯಲ್ಲಿ ಮಾಹಿತಿ ಕೇಳಲಾಗಿತ್ತು. ಅದರಂತೆ ಆಯುಕ್ತರು ಮಾಹಿತಿ ಒದಗಿಸಿದ್ದಾರೆ ಎಂದರು.

ಒತ್ತುವರಿಯಾಗಿರುವ 1.37 ಎಕರೆ ಜಾಗ ಪಹಣಿಯಲ್ಲಿ ಇಂದಿಗೂ ನಗರ ಪಾಲಿಕೆ ಹೆಸರಿನಲ್ಲಿಯೇ ಇದೆ ಎಂದು ಸದಸ್ಯರು ಹೇಳಿದರು. ಇದಕ್ಕೆ ಉತ್ತರಿಸಿದ ಮೇಯರ್, ಹಾಗೇನಾದರೂ ಇದ್ದಲ್ಲಿ ಇಂಡೀಕರಣ ವೇಳೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಲಿಸಿದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸಬೇಕಿದೆ. ಯಾವುದಕ್ಕೆ ಕಂದಾಯ ಕಟ್ಟಲಾಗಿದೆ? ಎಷ್ಟು ವಿಸ್ತೀರ್ಣದ ಜಾಗ ಅವರ ಸ್ವಾಧೀನದಲ್ಲಿದೆ? ಪಾಲಿಕೆ ವ್ಯಾಪ್ತಿಗೆ ಎಷ್ಟು ಜಾಗ ಇದೆ ಎಂಬುದರ ಬಗ್ಗೆ ವಿಸ್ತೃತ ಮಾಹಿತಿ ಪಡೆಯಬೇಕು ಎಂದು ಕ್ರಾಂತಿ ಪ್ರಸಾದ ತ್ಯಾಗಿ ಒತ್ತಾಯಿಸಿದರು.

ಒತ್ತುವರಿ ಮಾಡಿರುವ ಜಾಗಕ್ಕೆ ಪಾಲಿಕೆಯ ಬೋರ್ಡ್‌ ಹಾಕಬೇಕು ಎಂದು ಸದಸ್ಯ ಸಂತೋಷ್ ಆಗ್ರಹಿಸಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಯರ್ ಭರವಸೆ ನೀಡಿದರು.

ಬೋರ್ಡ್ ಹಾಕಿದ ಬಳಿಕ ಸಂಸ್ಥೆಯವರು ಯಾವ ದಾಖಲೆ ಒದಗಿಸುತ್ತಾರೆ ಎಂಬುದನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಸ್ಥೆಯಿಂದ ಕಡಿಮೆ ಕಂದಾಯ ಪಾವತಿ ಮಾಡುತ್ತಿದ್ದು, ಬಾಕಿ ಕಂದಾಯ ವಸೂಲಿಗೆ ಕ್ರಮ ವಹಿಸುವಂತೆ ಆಯುಕ್ತರಿಗೆ ಮೇಯರ್ ಸೂಚಿಸಿದರು.

ಉಪ ಮೇಯರ್ ಹೇಮಲತಾ, ಆಯುಕ್ತ ಕೃಷ್ಣಮೂರ್ತಿ, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು

ಜಾತ್ರೆ ನೆಪದಲ್ಲಿ ಸ್ಥಳೀಯರಿಗೆ ತೊಂದರೆ ಬೇಡ ಹಾಸನಾಂಬ ಜಾತ್ರಾ ಮಹೋತ್ಸವ ನೆಪದಲ್ಲಿ ದೇವಾಲಯದ ಸುತ್ತಲಿನ ನಿವಾಸಿಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಸದಸ್ಯ ಚಂದ್ರಶೇಖರ್ ಹೇಳಿದರು. ಮನೆಯ ಬಾಗಿಲಿನ ಎದುರೇ ಬ್ಯಾರಿಕೇಡ್ ಹಾಕಲಾಗಿದೆ. ಈ ಮನೆಯಲ್ಲಿ ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ ತುರ್ತು ಚಿಕಿತ್ಸೆಗೂ ತೀವ್ರ ತೊಂದರೆಯಾಗಲಿದೆ. ಮನೆಯಿಂದ ಹೊರಬರಲು ಸಹ ಜಾಗ ಬಿಡದೇ ಬ್ಯಾರಿಕೇಡ್ ಹಾಕಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ. ಜಾತ್ರೆಯ ಹೆಸರಲ್ಲಿ ಇಲ್ಲಿಯ ನಿವಾಸಿಗಳನ್ನು ಅಯ್ಯೋ ಅನ್ನಿಸಬೇಡಿ ಎಂದರು. ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಿರೀಶ್ ಭರವಸೆ ನೀಡಿದರು.

ಹೊಲಿಗೆ ಯಂತ್ರ ವಿತರಣೆ ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸದಸ್ಯರ ಗಮನಕ್ಕೆ ತಂದು ಮುಂದಿನ ಕೆಲ ದಿನಗಳಲ್ಲಿ ಅರ್ಹರಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು ಎಂದು ಮೇಯರ್ ಗಿರೀಶ್ ತಿಳಿಸಿದರು. ಹೊಲಿಗೆ ಯಂತ್ರ ವಿತರಣೆ ಸಂಬಂಧ ಮಹಿಳಾ ಸದಸ್ಯರು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಉತ್ತರಿಸಿದ ಮೇಯರ್ ಯಂತ್ರ ವಿತರಣೆ ವೇಳೆ ಅರ್ಹ ಫಲಾನುಭವಿಗಳು ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಹೊಲಿಗೆ ಯಂತ್ರ ವಿತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.